ಇತರೆ, ಸ್ಥಳೀಯ

ಆರೋಪಿಗಳ ಪರ ಸುಳ್ಳು ಸಾಕ್ಷಿ ನುಡಿದ ದೂರುದಾರ !? – ಸುಳ್ಳು ಸಾಕ್ಷ್ಯ, ಪ್ರಕರಣ ದಾಖಲಿಸಲು ಸುಳ್ಯದ ಹಿರಿಯ ನ್ಯಾಯಾಲಯ ಆದೇಶ

ಈ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ನೀಡುವ ಮೂಲಕ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಿದ ದೂರುದಾರರ ವಿರುದ್ಧ ಕ್ರಮ ಕೈಗೊಳ್ಳಲು ಸುಳ್ಯ ನ್ಯಾಯಾಲಯ ನೀಡಿರುವ ಆದೇಶ, ನ್ಯಾಯದ ಸತ್ಯತೆಯನ್ನು ಕಾಯುವ ದೃಷ್ಟಿಯಿಂದ ಮಹತ್ವದ ಎಚ್ಚರಿಕೆಯಾಗಿದೆ.

ಸುಳ್ಯ : 2011ರಲ್ಲಿ ಪ್ರಾರಂಭವಾದ ಶ್ರೀ ತತ್ವಮಸಿ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಶ್ರೀ ತತ್ವಮಸಿ ಎಂಟರ್‌ಪ್ರೈಸಸ್ (ರಿ.) ವಿರುದ್ಧದ ವಂಚನೆ ಪ್ರಕರಣದಲ್ಲಿ, ದೂರುದಾರ ಯತೀಂದ್ರ ಬಿನ್ ನಾರಾಯಣ್ ಬೆಳ್ಚಪ್ಪಾಡ (ಜಾಲ್ಸೂರು ಗ್ರಾಮ, ಸುಳ್ಯ ತಾಲೂಕು) ಅವರು ಸುಳ್ಳು ಸಾಕ್ಷ್ಯ ನೀಡಿರುವುದು ನ್ಯಾಯಾಲಯದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯವು ಕ್ರಮ ಕೈಗೊಳ್ಳಲು ಆದೇಶಿಸಿದೆ.

ಪ್ರಕರಣದ ಹಿನ್ನಲೆ

ಯತೀಂದ್ರ ಅವರು 17.11.2011 ರಂದು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅವರ ದೂರಿನಲ್ಲಿ, ತತ್ವಮಸಿ ಸಂಸ್ಥೆಗಳು “ಡ್ರೀಮ್ ಫೆಸ್ಟಿವಲ್ 2013-14” ಎಂಬ ಹೆಸರಿನಲ್ಲಿ ಸ್ಕೀಮ್‌ ನಡೆಸಿ ₹150/- ವಾರದ ಕಂತುಗಳಾಗಿ ಒಟ್ಟು ₹7,500/- ವಸೂಲಿ ಮಾಡಿ ವಂಚನೆ ನಡೆಸಿರುವುದಾಗಿ ಉಲ್ಲೇಖಿಸಿದ್ದರು.
ತನಿಖೆಯ ನಂತರ ಎಂಟು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿ ವಿಚಾರಣೆ ನಡೆದಿದೆ. ವಿಚಾರಣೆಯಲ್ಲಿ ಮೂವರು ಆರೋಪಿತರಿಗೆ ಈ ತಿಂಗಳ 3ರಂದು ಶಿಕ್ಷೆ ವಿಧಿಸಲಾಗಿದೆ.

ತೀರ್ಪಿನ ವೇಳೆ ಬೆಳಕಿಗೆ ಬಂದ ಸುಳ್ಳು ಸಾಕ್ಷ್ಯ

ನ್ಯಾಯಾಲಯದ ತೀರ್ಪಿನ ಕಂಡಿಕೆ 35 ರ ಪ್ರಕಾರ, ಪ್ರಮುಖ ಸಾಕ್ಷಿದಾರರಾಗಿದ್ದ ದೂರುದಾರ ಯತೀಂದ್ರ ಮತ್ತು ಇತರ ಐದು ಮಂದಿ ಪ್ರಾಸಿಕ್ಯೂಷನ್ ಸಾಕ್ಷಿದಾರರು ವಿಚಾರಣೆಯ ಸಂದರ್ಭದಲ್ಲಿ ಆರೋಪಿತರ ಪರವಾಗಿ ನಿಂತು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ದೃಢಪಟ್ಟಿದೆ.
ಆರೋಪಿತರೊಂದಿಗೆ ರಾಜಿ ಮಾಡಿಕೊಂಡಿರುವ ಕಾರಣಕ್ಕೆ ನ್ಯಾಯಾಲಯದ ಮುಂದೆ “ನನಗೆ ಪ್ರಕರಣದ ವಿಷಯ ತಿಳಿದಿಲ್ಲ” ಎಂದು ಹೇಳಿರುವುದರಿಂದ ಅವರು ಭಾರತೀಯ ದಂಡ ಸಂಹಿತೆ ಕಲಂ 191 ಮತ್ತು 193 ಉಲ್ಲಂಘನೆ ಮಾಡಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ

ಸಂಬಂಧಿತ ಕಾನೂನು ವಿಧಾನಗಳು ಏನು ಹೇಳುತ್ತದೆ !?..

ಭಾ.ದಂ.ಸಂ. ಕಲಂ 191: ಸತ್ಯವನ್ನು ಹೇಳಲು ಬದ್ಧನಾದ ವ್ಯಕ್ತಿ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿಕೆ ನೀಡಿದರೆ, ಅದು ಸುಳ್ಳು ಸಾಕ್ಷ್ಯ ಎಂದು ಪರಿಗಣಿಸಲಾಗುತ್ತದೆ.
ಭಾ.ದಂ.ಸಂ. ಕಲಂ 193: ನ್ಯಾಯಾಂಗ ವ್ಯವಹಾರದಲ್ಲಿ ಸುಳ್ಳು ಸಾಕ್ಷ್ಯ ನೀಡಿದರೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹10,000/- ವರೆಗೆ ದಂಡ ವಿಧಿಸಬಹುದು.

ನ್ಯಾಯಾಲಯದ ಆದೇಶ ?

ನ್ಯಾಯಾಧೀಶ ಬಿ. ಮೋಹನ್ ಬಾಬು ರವರು ತಮ್ಮ ಆದೇಶದಲ್ಲಿ — “ಪ್ರಾಸಾ-1 ಯತೀಂದ್ರ ಬಿನ್ ನಾರಾಯಣ್ ಬೆಳ್ಚಪ್ಪಾಡ, ಅಡ್ಕಾರು ಬೈಲು ಮನೆ, ಜಾಲ್ಸೂರು ಗ್ರಾಮ, ಸುಳ್ಯ ತಾಲೂಕು ರವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 191 ಮತ್ತು 193 ರಡಿಯಲ್ಲಿ ನ್ಯಾಯಾಲಯದ ಪರವಾಗಿ ಸೂಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಈ ನ್ಯಾಯಾಲಯದ ಕಚೇರಿಗೆ ಆದೇಶಿಸಲಾಗುತ್ತದೆ” ಎಂದು  ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಮುಂದಿನ ಹಂತ!

ಪ್ರಸ್ತುತ ಈ ವಿಷಯದಲ್ಲಿ ಸಿ.ಸಿ. ಸಂಖ್ಯೆ 299/2024 ರಲ್ಲಿ ಸುಳ್ಳು ಸಾಕ್ಷ್ಯದ ಕುರಿತಂತೆ ಅಭಿಯೋಜನೆಯ ಪರವಾಗಿ ಅರ್ಜಿ ಸಲ್ಲಿಕೆಯಾಗಿದ್ದು, ನ್ಯಾಯಾಲಯವು ದೂರುದಾರರಿಗೆ ನೋಟಿಸ್ ನೀಡಿದೆ. ವಿವರಣೆ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ನಂತರ, ಪ್ರಾಸಾ-1 ವಿರುದ್ಧ ಪ್ರಕರಣ ದಾಖಲಿಸುವ ಕುರಿತು ಅಂತಿಮ ಆದೇಶ ನಿರೀಕ್ಷೆಯಲ್ಲಿದೆ

 

Related Posts