ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ 46ನೇ ವರ್ಷದ ವಾರ್ಷಿಕ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಸಂಸ್ಥೆಯ ಐಶ್ವರ್ಯ ಮದುವೆ ಗದ್ದೆ ಸಭಾಭವನದಲ್ಲಿ ಭಾನುವಾರ ನಡೆಯಿತು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯದ ಅಧ್ಯಕ್ಷ ಡಾ. ಚಿದಾನಂದ ಕೆ.ವಿ. ಕಾರ್ಯಕ್ರಮವನ್ನು ಉದ್ಘಾಟಿಸಿ, ಕರ್ನಾಟಕ ಅರೆಭಾಷೆ ಅಕಾಡೆಮಿಯ ಗೌರವ ಪ್ರಶಸ್ತಿಗೆ ಭಾಜನರಾದ ವಿಶ್ರಾಂತ ಪ್ರಾಂಶುಪಾಲ ಕೆ.ಆರ್. ಗಂಗಾಧರ್ ಅವರನ್ನು ಸನ್ಮಾನಿಸಿ ಅಭಿನಂದನಾ ನುಡಿಗಳನ್ನು ಸಲ್ಲಿಸಿದರು.
ಸರ್ಕಾರಿ ಪದವಿ ಕಾಲೇಜು, ಪುತ್ತೂರು ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ದಿಕ್ಸೂಚಿ ಭಾಷಣ ಮಾಡಿದರು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ದಿವಾಕರ್ ರೈ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಆಡ್ತಲೆ, ಸಂಸ್ಥೆಯ ಕಾರ್ಯದರ್ಶಿ ಎ. ಅಬ್ದುಲ್ಲ, ಕೋಶಾಧಿಕಾರಿ ಸಂಶುದ್ದಿನ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಕುರುಂಜಿ ಉಪಸ್ಥಿತರಿದ್ದರು.

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಂಸ್ಥೆಯನ್ನು ಪ್ರತಿನಿಧಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಕೃತಿ ಕೆ.ಎಸ್., ಸುಮ ಕೆ.ಆರ್., ದೀಪ್ತಿ ಕೆ.ಸಿ., ಚಂದನಾ, ಜಸ್ಮಿತಾ ಹಾಗೂ ಚಿಂತನಾ ಅವರಿಗೆ ಅಭಿನಂದನಾ ಸನ್ಮಾನ ಸಲ್ಲಿಸಲಾಯಿತು.
ಸಂಸ್ಥೆಯ ಪ್ರಾಂಶುಪಾಲ ಸುರೇಶ್ ವಾಗ್ಲೆ ವರದಿ ವಾಚಿಸಿದರು. ಸಂಚಾಲಕ ಎ.ಸಿ. ವಸಂತ ಸ್ವಾಗತಿಸಿದರು. ಮುಖ್ಯಗುರು ಸೋಮಶೇಖರ ವಂದಿಸಿದರು. ಜಸ್ಮಿತಾ, ರೋಹಿಣಿ ಮತ್ತು ದೀಕ್ಷಾ ಪ್ರಾರ್ಥಿಸಿದರು. ವಿಧ್ಯಾರ್ಥಿಗಳ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧಕರಿಗೆ ನೀಡಲಾದ ದತ್ತಿನಿಧಿ ಪ್ರಶಸ್ತಿ ಪಟ್ಟಿ ಪದ್ಮಕುಮಾರ್, ಮನೋಜ್ ಕುಮಾರ್ ಹಾಗೂ ಶಾಂತಿ ಎ.ಕೆ. ವಾಚಿಸಿದರು. ನಂತರ ಪ್ರತಿಭಾ ಪುರಸ್ಕಾರದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಿಶೋರ್ ಕುಮಾರ್ ಕಿರ್ಲಾಯ ಮತ್ತು ಮೋಹನ್ ಚಂದ್ರ ನಿರೂಪಿಸಿದರು.

ಸಂಜೆಯ ವೇಳೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಲೋಕೇಶ್ ಊರುಬೈಲ್ ಅವರ ನಿರ್ದೇಶನದ ಅರೆಭಾಷೆ ನಾಟಕ “ಅಪ್ಪ” ಪ್ರದರ್ಶನಗೊಂಡಿತು.


