Featured, ಅಂಕಣ, ಇತರೆ, ಲೇಖನ, ಸ್ಥಳೀಯ

ನಮ್ಮೂರಿನ ತೆರೆಮರೆಯ ಸಾಧಕ ಮೂಸಾ ಹಮೀದ್ ಅವರಿಗೆ ಅಲ್ ಕೋಬರ್‌ನಲ್ಲಿ “ಮ್ಯಾನ್ ಆಫ್ ದಿ ಇಯರ್ – 2024” ಪ್ರಶಸ್ತಿ ಪ್ರದಾನ

ಸಮಾಜಸೇವೆಯಲ್ಲಿ ಸಲ್ಲಿಸಿದ ಅಮೂಲ್ಯ ಕೊಡುಗೆಗೆ ಗೌರವ ಪಡೆದ ನಮ್ಮೂರಿನ ಹೆಮ್ಮೆಯ ಸಮಾಜಸೇವಕ

ಸುಳ್ಯದ ಹಳೆಗೇಟು ಬೆಟ್ಟಂಪ್ಪಾಡಿ ನಿವಾಸಿ, ದಿವಂಗತ ಮೂಸಾನ್ ಅವರ ಪುತ್ರ ಮೂಸಾ ಹಮೀದ್  ಅವರು ಕಳೆದ ಮೂರು ದಶಕಗಳಿಂದ ಸೌದಿ ಅರೇಬಿಯಾದಲ್ಲಿ ವಾಸವಿದ್ದು, ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಾ ಅನಿವಾಸಿ ಭಾರತೀಯರ ಆಪದ್ಬಾಂಧವರಾಗಿ ಗುರುತಿಸಿಕೊಂಡಿರುವ ಅಪರೂಪದ ಸಮಾಜಸೇವಕರಾಗಿದ್ದಾರೆ. ಜೀವನ  ನಿರ್ವಹಣೆಯ ಉದ್ದೇಶದಿಂದ ವಿದೇಶಕ್ಕೆ ತೆರಳಿದ ಹಾಜಿ ಹಮೀದ್ ಭಾಯ್ ಅವರು, ತಮ್ಮ ಉದ್ಯೋಗದ ಜವಾಬ್ದಾರಿಗಳ ನಡುವೆಯೂ ಸಮಾಜದ ನೋವಿಗೆ ಸ್ಪಂದಿಸುವ ಹೃದಯವಂತಿಕೆಯನ್ನು ಕಳೆದುಕೊಳ್ಳದೆ, ಸೇವೆಯನ್ನೇ ಜೀವನದ ಧ್ಯೇಯವನ್ನಾಗಿಸಿಕೊಂಡವರು. ಕೆಲಸದ ಬಿಡುವಿನ ಕ್ಷಣಗಳನ್ನೂ ಅವರು ಸಮಾಜಸೇವೆಗೆ ಮೀಸಲಿಟ್ಟು, ಹಲವು ಸಂಘ–ಸಂಸ್ಥೆಗಳ ಮೂಲಕ ಮಾನವೀಯ ಕಾರ್ಯಗಳಲ್ಲಿ  ತೊಡಗಿಸಿಕೊಂಡಿದ್ದಾರೆ

ಕರ್ನಾಟಕ ಕಲ್ಚರಲ್ ಫೌಂಡೇಶನ್, ದಕ್ಷಿಣ ಕನ್ನಡ ಸುನ್ನಿ ಸೆಂಟರ್, ಮೂಡಡ್ಕ, ದಾರುಲ್ ಇಕ್ಮ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳ ಸೌದಿ ಅರೇಬಿಯಾ ಘಟಕಗಳ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೆ ಮುಕ್ಕ್ವೆ ಸಂಸ್ಥೆಯ ವಿದೇಶ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ, ಅನೇಕ ಸಂಘಟನೆಗಳ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಇವರು

ಕಳೆದ ವರ್ಷ ಉಮ್ರಾ ಯಾತ್ರೆಗೆಂದು ಸೌದಿ ಅರೇಬಿಯಾಗೆ ತೆರಳಿದ್ದ ಸುಮಾರು 187 ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ, ಸ್ಥಳೀಯ ಸಂಘ–ಸಂಸ್ಥೆಗಳು ಹಾಗೂ ದಾನಿಗಳ ಸಹಕಾರ ಪಡೆದು ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಸ್ಮರಣೀಯ. ಹತ್ತಾರು ಮುಖಂಡರ ಜೊತೆಗೂಡಿ ಮಾನವೀಯ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದವರಲ್ಲಿ ಹಾಜಿ ಹಮೀದ್ ಭಾಯ್ ಕೂಡ ಒಬ್ಬರಾಗಿದ್ದರು.

ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಡಿ.ಕೆ.ಎಸ್.ಸಿ ಮಂಗಳೂರು ಅಲ್‌ಕೊಬರ್ ಯೂನಿಟ್ ವತಿಯಿಂದ “ಮ್ಯಾನ್ ಆಫ್ ದಿ ಇಯರ್ – 2024” ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಈ ಪ್ರಶಸ್ತಿ ಕೇವಲ ವ್ಯಕ್ತಿಗೆ ದೊರೆತ ಗೌರವವಲ್ಲ; ವಿದೇಶದಲ್ಲಿದ್ದರೂ ಊರು–ನಾಡಿನೊಂದಿಗೆ ಹೃದಯತಂತುಗಳನ್ನು ಕಟ್ಟಿ ಹಿಡಿದಿರುವ ಸಮಾಜಸೇವೆಯ ಸಂಕೇತವಾಗಿದೆ. ಪವಿತ್ರ ಹಜ್ ಯಾತ್ರೆಗೆಂದು ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ವಿವಿಧ ಭಾಗಗಳಿಂದ ತೆರಳುವ ಹಾಜ್ಜಾಜಿಗಳಿಗೆ ಅಗತ್ಯ ಸಹಾಯ–ಸಹಕಾರ ಒದಗಿಸುವ ಸಂಘಟನೆಗಳಲ್ಲಿಯೂ ಅವರು ಪ್ರಮುಖವಾಗಿ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಈ ಭಾಗದಿಂದ ವಿದೇಶಕ್ಕೆ ತೆರಳುವ ನೂರಾರು ಉಲಮಾ, ಉಮರಾ ಹಾಗೂ ಧಾರ್ಮಿಕ ನೇತಾರರಿಗೆ ಅವರು ಆಶಾದಾಯಕ ಸಹಾಯಕರಾಗಿ, ನಮ್ಮೂರಿನ ಸಮಾಜಸೇವಕನಾಗಿ ಪರಿಚಿತರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ವಿದೇಶದ ನೆಲದಲ್ಲಿ ಮಾನವೀಯತೆಯ ದೀಪ ಬೆಳಗಿಸುತ್ತಾ, ಅನೇಕ ಸಂಘ–ಸಂಸ್ಥೆಗಳ ಗೌರವಕ್ಕೆ ಪಾತ್ರರಾಗಿರುವ ಹಾಜಿ ಹಮೀದ್ ಭಾಯ್ ಅವರ ಸೇವೆಗಳು ಸಮಾಜಕ್ಕೆ ಮಾದರಿಯಾಗಿವೆ. ಇಂತಹ ವ್ಯಕ್ತಿಯನ್ನು ನಮ್ಮೂರಿನವರಾಗಿ ಹೇಳಿಕೊಳ್ಳಲು ಪ್ರತಿಯೊಬ್ಬರಿಗೂ ಗೌರವ ಹಾಗೂ ಹೆಮ್ಮೆ ಅನಿಸುತ್ತದೆ.

ಬರಹ : ಹಸೈನಾರ್ ಜಯನಗರ ✍️

Related Posts