ಕೊಚ್ಚಿ: ಸಾಮಾನ್ಯ ಜನರ ಬದುಕಿನ ನೋವು–ನಲಿವುಗಳನ್ನು ತನ್ನ ಅಸಾಧಾರಣ ಪ್ರತಿಭೆಯಿಂದ ಪರದೆ ಮೇಲೆ ಜೀವಂತಗೊಳಿಸಿದ್ದ ಖ್ಯಾತ ಚಿತ್ರಕಥೆಗಾರ, ನಟ ಹಾಗೂ ನಿರ್ದೇಶಕ ಶ್ರೀನಿವಾಸನ್ (69) ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉದಯಂಪೀರೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇಂದು (ಡಿ.20) ಬೆಳಿಗ್ಗೆ ಡಯಾಲಿಸಿಸ್ಗೆ ಕರೆದೊಯ್ಯುವ ವೇಳೆ ಅಸ್ವಸ್ಥಗೊಂಡ ಅವರನ್ನು ತುರ್ತುವಾಗಿ ತ್ರಿಪುನಿತುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 8.30ರ ಸುಮಾರಿಗೆ ಅವರು ಕೊನೆಯುಸಿರೆಳೆದರು.
ಸಾಮಾನ್ಯ ಮನುಷ್ಯನ ಹೃದಯದ ತಾಳವನ್ನು ಅರಿತು ಕಥೆ ಹೇಳಿದ ಶ್ರೀನಿವಾಸನ್ ಅವರ ಅಗಲಿಕೆ ಮಲಯಾಳಂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ನಗುವಿನ ಹಿಂದೆ ಮರೆಮಾಡಿದ್ದ ಜೀವನದ ಸಂಕಟಗಳನ್ನು ತಮ್ಮ ಪಾತ್ರಗಳ ಮೂಲಕ ಅವರು ಅನೇಕ ಬಾರಿ ಸಮಾಜದ ಮುಂದೆ ತೆರೆದಿಟ್ಟಿದ್ದರು.
ಅವರ ಪಾರ್ಥಿವ ಶರೀರವನ್ನು ತ್ರಿಪುನಿತುರ ತಾಲ್ಲೂಕು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅವರು ಪತ್ನಿ ವಿಮಲಾ, ಪುತ್ರರಾದ ವಿನೀತ್ ಶ್ರೀನಿವಾಸನ್ (ನಿರ್ದೇಶಕ, ನಟ, ಚಿತ್ರಕಥೆಗಾರ, ಗಾಯಕ) ಹಾಗೂ ಧ್ಯಾನ್ ಶ್ರೀನಿವಾಸನ್ (ನಿರ್ದೇಶಕ, ನಟ), ಸೊಸೆಯಂದಿರು ಸೇರಿದಂತೆ ಅಪಾರ ಚಿತ್ರಾಭಿಮಾನಿಗಳು, ಸಹ ಕಲಾವಿದರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ

