ಅಜ್ಜಾವರ ಗ್ರಾಮದಲ್ಲಿ ಹಗಲು–ರಾತ್ರಿ ನಿರಂತರವಾಗಿ ಕಾಡಾನೆಗಳು ರಸ್ತೆಗಳಲ್ಲೂ ಹಾಗೂ ಕೃಷಿ ತೋಟಗಳಲ್ಲೂ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಜನಜೀವನ ಹಾಗೂ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಡಾನೆಗಳ ಹಾವಳಿ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮಾಜಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ಅರಣ್ಯ ಸಚಿವರನ್ನು ಭೇಟಿ ಮಾಡಿದ ರಂಜಿತ್ ರೈ ಮೇನಾಲ ಅವರು, ಮನವಿಯಲ್ಲಿ ಅಜ್ಜಾವರ ಗ್ರಾಮದ ಮೇದಿನಡ್ಕ, ಪೊಡುಂಬ, ನೆಲ್ತಿಲ ಕೊನ್ನೊಡಿ, ಇರಂತಮಜಲು, ತುದಿಯಡ್ಕ ಮೇನಾಲ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡುಗಳು ದಿನಂಪ್ರತಿ ಬೀಡು ಬಿಟ್ಟಿರುವುದಾಗಿ ವಿವರಿಸಿದರು. ರಾತ್ರಿ–ಹಗಲು ಎನ್ನದೆ ಕಾಡಾನೆಗಳು ಕೃಷಿ ತೋಟಗಳಿಗೆ ನುಗ್ಗಿ ಬೆಳೆ ನಾಶಪಡಿಸುವುದರ ಜೊತೆಗೆ ಜನರ ಜೀವಕ್ಕೆ ಹಾಗೂ ವಾಹನ ಸಂಚಾರಕ್ಕೆ ಅಪಾಯಕಾರಿಯಾದ ಸ್ಥಿತಿ ನಿರ್ಮಾಣವಾಗಿರುವುದಾಗಿ ತಿಳಿಸಿದರು.

ಈ ಕುರಿತು ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಂಡಿದ್ದು, ಸ್ಥಳೀಯ ಜನರ ಕೃಷಿ ಹಾಗೂ ಜೀವ ರಕ್ಷಣೆಯ ಹಿತದೃಷ್ಟಿಯಿಂದ ತುರ್ತಾಗಿ ಸೋಲಾರ್ ಹ್ಯಾಂಗಿಂಗ್ ಫೆನ್ಸಿಂಗ್ ಅಳವಡಿಸಿ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿಗೆ ಸ್ಪಂದಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಸಮಸ್ಯೆಯ ಗಂಭೀರತೆಯನ್ನು ಮನಗಂಡು ಅತಿ ಶೀಘ್ರದಲ್ಲಿ ಸೋಲಾರ್ ಫೆನ್ಸಿಂಗ್ ಅಳವಡಿಸುವ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮೋದ್ ರೈ ಮೇನಾಲ, ಶ್ರವೀಣ್ ರೈ ಮೇನಾಲ, ಪ್ರದೀಪ್ ಪೂಜಾರಿ ಪೊಡುಂಬ ಮೊದಲಾದವರು ಉಪಸ್ಥಿತರಿದ್ದರು.
