ಬದಲಾವಣೆಗಾಗಿ ಸಂಕಲ್ಪ – ನ್ಯಾಯಕ್ಕಾಗಿ ಹೋರಾಟ” ಧ್ಯೇಯದೊಂದಿಗೆ ಸವಣೂರಿನಲ್ಲಿ ಎಸ್‌ಡಿಪಿಐ ಸಮಾವೇಶ

ಸವಣೂರು,ಜನವರಿ 12: “ಬದಲಾವಣೆಗಾಗಿ ಸಂಕಲ್ಪ, ನ್ಯಾಯಕ್ಕಾಗಿ ಹೋರಾಟ” ಎಂಬ ಧ್ಯೇಯೋದ್ದೇಶದೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಪಕ್ಷದ ಸಮಾವೇಶ ಹಾಗೂ SIR ಬಗ್ಗೆ ಜನಜಾಗೃತಿ ಕಾರ್ಯಕ್ರಮವು ಸವಣೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಹಾಗೂ ನ್ಯಾಯವಾದಿ ಅಶ್ರಫ್ ಅಗ್ನಾಡಿ ಅವರು SIR (ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ) ವಿಷಯದ ಬಗ್ಗೆ ಸವಿಸ್ತಾರವಾಗಿ ವಿಚಾರ ಮಂಡಿಸಿದರು.
“ಬಿಹಾರದಲ್ಲಿ SIR ಮಾಹಿತಿಯ ಆಧಾರದಲ್ಲಿ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಹೊರಗಟ್ಟಿರುವ ಆತಂಕಕಾರಿ ಬೆಳವಣಿಗೆ ನಡೆದಿದೆ. ಈ ಹಿನ್ನೆಲೆಯಲ್ಲಿ ಎಸ್‌ಡಿಪಿಐ SIR ಮ್ಯಾಪಿಂಗ್ ಗೆ ಸಹಕಾರ ನೀಡುತ್ತಲೇ ಇದರ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ನಮ್ಮಿಂದ ಆಗಬೇಕು ಎಂದರು.
ಮುಂದುವರಿದು ಮಾತನಾಡಿದ ಅವರು, “ಬೆಂಗಳೂರಿನ ಮಹದೇವಪುರದಲ್ಲಿ ಒಂದೇ ಮನೆ ಸಂಖ್ಯೆಯಲ್ಲಿ 80 ಮತದಾರರು ಇರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ದಾಖಲೆ ಸಮೇತ ಸಾಬೀತುಪಡಿಸಿದ್ದರು. ಆದರೆ, ಈ ಅಕ್ರಮವನ್ನು ಸರಿಪಡಿಸುವ ಬದಲು ಚುನಾವಣಾ ಆಯೋಗವು ರಾಹುಲ್ ಗಾಂಧಿಯವರ ವಿರುದ್ಧವೇ ಅದನ್ನು ಕೇಳಲು ನೀವು ಯಾರು ಹಾಗೂ ಅದರ ಬಗ್ಗೆ ಅಫಿದವಿತ್ ನ್ನು ಸಲ್ಲಿಸಿ ಎಂಬ ಪ್ರತಿಕ್ರಿಯೆ ನೀಡಿದ್ದು ಪ್ರಜಾಪ್ರಭುತ್ವದ ವಿಪರ್ಯಾಸ. ಈ ವ್ಯವಸ್ಥಿತ ಷಡ್ಯಂತರದ ವಿರುದ್ಧ ಎಸ್‌ಡಿಪಿಐ ಕಾರ್ಯಕರ್ತರು ಜಾಗೃತರಾಗಬೇಕು. SIR ಮ್ಯಾಪಿಂಗ್ ಮಾಡುವಾಗ ಬಿ.ಎಲ್.ಒ (BLO) ಗಳೊಂದಿಗೆ ಪೂರ್ಣವಾಗಿ ಸಹಕರಿಸಬೇಕು. ಅಷ್ಟೇ ಅಲ್ಲದೆ, ಬಿಜೆಪಿ ಹೊರತುಪಡಿಸಿ ಕಾಂಗ್ರೆಸ್ ಜೆಡಿಎಸ್ ಹಾಗೂ ಉಳಿದ ಎಲ್ಲಾ ಪಕ್ಷದ ಕಾರ್ಯಕರ್ತರಿಗೂ ಮತ್ತು ಮತದಾರರಿಗೂ ಈ ಬಗ್ಗೆ ಮಾಹಿತಿ ನೀಡಿ ಮ್ಯಾಪಿಂಗ್ ಮಾಡಲು ಸಹಕರಿಸುವುದರೊಂದಿಗೆ ಜನಜಾಗೃತಿ ಮೂಡಿಸಬೇಕು” ಎಂದು ಅವರು ಕರೆ ನೀಡಿದರು.

ಚುನಾವಣಾ ಸಿದ್ಧತೆಗೆ ಕರೆ
ಎಸ್‌ಡಿಪಿಐ ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಅವರು ಮಾತನಾಡಿ, “ಹೋರಾಟ ರಾಜಕೀಯ ಮತ್ತು ಚುನಾವಣಾ ರಾಜಕೀಯದ ನಡುವೆ ಸಮನ್ವಯ ಸಾಧಿಸಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಿನಿಂದಲೇ ಸಜ್ಜಾಗಬೇಕು” ಎಂದು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು. ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್‌ಡಿಪಿಐ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ, ಪ್ರಭುತ್ವದ ಷಡ್ಯಂತ್ರದಿಂದ ಬಂಧಿಯಾಗಿರುವ ಬೆಳ್ಳಾರೆ ಗ್ರಾ.ಪಂ ಸದಸ್ಯ ಹಾಗೂ ಸುಳ್ಯ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಅವರ ಸೇವೆಯನ್ನು ಸ್ಮರಿಸಿ, ಅವರ ಅನುಪಸ್ಥಿತಿಯಲ್ಲಿ ವಿಧಾನಸಭಾ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ತಂಬಿನಮಕ್ಕಿ ಅವರು ಸ್ಮರಣಿಕೆಯನ್ನು ಸ್ವೀಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮೀರಝ್ ಸುಳ್ಯ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೀಕ್ ಅಲೆಕ್ಕಾಡಿ, ಅಬ್ದುಲ್ ಕಲಾಂ ಸುಳ್ಯ ಉಪಸ್ಥಿತರಿದ್ದರು.
ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಫೀಕ್ ಸ್ವಾಗತಿಸಿದರು. ಕಾರ್ಯದರ್ಶಿ ಶರೀಫ್ ನಿಂತಿಕಲ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಬೆಳ್ಳಾರೆ ಬ್ಲಾಕ್ ಅಧ್ಯಕ್ಷ ರಫೀಕ್ ಎಂ.ಎ. ಧನ್ಯವಾದಗೈದರು.

