ಕೊಯನಾಡು ಗಣಪತಿ ಗುಡಿ ಸಮೀಪ ಸ್ಕೂಟಿ ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ಜನವರಿ 13ರಂದು ವರದಿಯಾಗಿದೆ.
ಮೃತಪಟ್ಟ ಸ್ಕೂಟಿ ಸವಾರನನ್ನು ಕೊಯನಾಡು ಪೆರಂಗೋಡಿ ನಿವಾಸಿ ನಿಶಾಂತ್ (30) ಎಂದು ಗುರುತಿಸಲಾಗಿದೆ. ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಟ್ರ್ಯಾಕ್ಟರ್‌ನ ಹಿಂಬಾಗಕ್ಕೆ ನಿಶಾಂತ್ ಸವಾರನಾಗಿದ್ದ ಸ್ಕೂಟಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ತೀವ್ರತೆಯಿಂದ ನಿಶಾಂತ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಅಪಘಾತವು ಮೃತ ಯುವಕನ ಮನೆಯ ಸಮೀಪ, ಸುಮಾರು 200 ಮೀಟರ್ ದೂರದಲ್ಲಿ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೃತ ನಿಶಾಂತ್ ಅವರ ಸಹೋದರ ಜೀವಿತ್ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ದುರ್ಘಟನೆಯಲ್ಲಿ ತಾಯಿ ಹಾಗೂ ಸಹೋದರರನ್ನು ಅಗಲಿದ್ದಾರೆ. ಜನವರಿ 14ರಂದು ಸಹೋದರ ಜೀವಿತ್ ಆಗಮನಿಸಿದ ಬಳಿಕ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿದುಬಂದಿದೆ.

