ಬೆಳ್ತಂಗಡಿ (ಜ. 16): ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ಒಡಿಲ್ನಾಲ ಎಂಬಲ್ಲಿ 9ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿ ಸುಮಂತ್ ಅವರ ಮೃತದೇಹ ನಿಗೂಢ ರೀತಿಯಲ್ಲಿ ಕೆರೆಯಲ್ಲಿ ಪತ್ತೆಯಾಗಿರುವುದು ತೀವ್ರ ಆತಂಕಕಾರಿ ಮತ್ತು ಸಂಶಯಾಸ್ಪದವಾಗಿದೆ. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕೂಡಲೇ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಎಸ್ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅವರು ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.

ರಾಷ್ಟ್ರಮಟ್ಟದ ವಿಜ್ಞಾನ ಸ್ಪರ್ಧೆಗೆ ಆಯ್ಕೆಯಾಗಿದ್ದ ಒಬ್ಬ ಪ್ರತಿಭಾವಂತ ಬಾಲಕ, ಬೆಳ್ಳಂಬೆಳಿಗ್ಗೆ ದೇವಸ್ಥಾನಕ್ಕೆ ಹೋಗುವ ಹಾದಿಯಲ್ಲಿ ನಾಪತ್ತೆಯಾಗಿ, ನಂತರ ಶವವಾಗಿ ಪತ್ತೆಯಾಗಿರುವುದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಘಟನಾ ಸ್ಥಳದಲ್ಲಿ ಮತ್ತು ದಾರಿಯುದ್ದಕ್ಕೂ ರಕ್ತದ ಕಲೆಗಳು ಕಂಡುಬಂದಿರುವುದು ಹಾಗೂ ಮೃತದೇಹದ ಮೇಲೆ ಬಲವಾದ ಗಾಯದ ಗುರುತುಗಳಿರುವುದು ಇದು ಕೇವಲ ಅಪಘಾತವಲ್ಲ, ಬದಲಾಗಿ ಇದರ ಹಿಂದೆ ಯಾವುದೋ ಕ್ರೂರ ಕೃತ್ಯ ಅಡಗಿರುವ ಸಾಧ್ಯತೆಯನ್ನು ಬಲಪಡಿಸಿದೆ.
ಆರಂಭದಲ್ಲಿ ಚಿರತೆ ದಾಳಿಯಿರಬಹುದು ಎಂಬ ಗಾಳಿ ಸುದ್ದಿಗಳು ಹರಡಿದ್ದರೂ, ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಗಳು ಕೊಲೆಯ ಸಂಶಯವನ್ನು ಹುಟ್ಟುಹಾಕಿವೆ. ಇಂತಹ ಘಟನೆಗಳು ನಡೆದಾಗ ಗ್ರಾಮಸ್ಥರಲ್ಲಿ ಭೀತಿ ಮನೆ ಮಾಡುವುದು ಸಹಜ. ಹಾಗಾಗಿ, ಪೊಲೀಸ್ ಇಲಾಖೆಯು ವಿಳಂಬ ಮಾಡದೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿ, ಈ ಸಾವಿನ ಹಿಂದಿನ ನೈಜ ಕಾರಣವನ್ನು ಬಯಲಿಗೆಳೆಯಬೇಕು. ಒಂದು ವೇಳೆ ಇದು ಹತ್ಯೆಯಾಗಿದ್ದರೆ, ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
ನೊಂದ ಕುಟುಂಬಕ್ಕೆ ಸಾಂತ್ವನ ಹೇಳುತ್ತಾ, ಅವರಿಗೆ ಸರಕಾರದ ವತಿಯಿಂದ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಅಕ್ಬರ್ ಬೆಳ್ತಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
