ಬೆಳ್ತಂಗಡಿ (ಜ.17): ಬೆಳ್ತಂಗಡಿ ತಾಲೂಕಿನ ಮುಂಡಾಜೆ ಹಾಗೂ ಉಜಿರೆ, ನಡ ಪ್ರದೇಶದ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ದಾಳಿಗಳು ನಡೆಯುತ್ತಿದ್ದು, ಒಂದರ ನಂತರ ಒಂದರಂತೆ ದನ, ಕರು ಹಾಗೂ ಆಡುಗಳು ಚಿರತೆ ದಾಳಿಗೆ ಬಲಿಯಾಗುತ್ತಿರುವುದರಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಕೂದಲೆಳೆಯ ಅಂತರದಲ್ಲಿ ಚಿರತೆ ದಾಳಿಯಿಂದ ಪಾರಾಗಿರುವ ಘಟನೆ ಕೂಡ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಸ್ಥಳ ಪರಿಶೀಲನೆ ನಡೆಸಿ, ಚಿರತೆಯನ್ನು ಹಿಡಿಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಚಿರತೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಮೂಲಕ ಈ ಭಾಗದ ಜನರ, ಸಾಕು ಪ್ರಾಣಿಗಳ ಜೀವಕ್ಕೆ ಉಂಟಾಗುತ್ತಿರುವ ಹಾನಿಯನ್ನು ತಪ್ಪಿಸಬೇಕು ಎಂದು ಅಶ್ಫಾಕ್ ಪುಂಜಾಲಕಟ್ಟೆ ಆಗ್ರಹಿಸಿದ್ದಾರೆ.
