ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಕ್ರೀನ್ ಅಡಿಕ್ಷನ್ ನಿಯಂತ್ರಣಕ್ಕೆ ‘SHUT’ ಕ್ಲಿನಿಕ್‌ನ ವಿಶೇಷ ಪೋಷಕರ ಕಾರ್ಯಕ್ರಮ

ಬೆಂಗಳೂರು :
ಇತ್ತೀಚಿನ ದಿನಗಳಲ್ಲಿ ಪೋಷಕರನ್ನು ಅತ್ಯಂತ ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ವ್ಯಸನ. ಊಟ ಮಾಡುವಾಗ, ಮಲಗುವಾಗ, ಓದುವಾಗ—ಎಲ್ಲ ಸಂದರ್ಭಗಳಲ್ಲೂ ಮೊಬೈಲ್ ಬೇಕೆಂಬ ಹಠ ಮಕ್ಕಳಲ್ಲಿ ಹೆಚ್ಚುತ್ತಿದ್ದು, ಇದರಿಂದ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗದೆ ಕಂಗಾಲಾಗಿರುವ ಪೋಷಕರಿಗೆ ಬೆಂಗಳೂರಿನ ಪ್ರತಿಷ್ಠಿತ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಆಶಾಕಿರಣವಾಗಿ ಪರಿಣಮಿಸಿದೆ. ಶಾಲಾ ಮಕ್ಕಳಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಮೊಬೈಲ್ ಫೋನ್, ಸಾಮಾಜಿಕ ಜಾಲತಾಣ ಹಾಗೂ ಆನ್‌ಲೈನ್ ಗೇಮಿಂಗ್ ಚಟವನ್ನು ನಿಯಂತ್ರಿಸುವ ಉದ್ದೇಶದಿಂದ, ನಿಮ್ಹಾನ್ಸ್‌ನ ‘ಸರ್ವಿಸ್ ಫಾರ್ ಹೆಲ್ದಿ ಯೂಸ್ ಆಫ್ ಟೆಕ್ನಾಲಜಿ’ (SHUT – ಶಟ್) ಕ್ಲಿನಿಕ್ ಪೋಷಕರಿಗಾಗಿ ವಿಶೇಷ ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಪೋಷಕರಿಗೇ ವಿಶೇಷ ತರಬೇತಿ.!!!
ತಂತ್ರಜ್ಞಾನದ ವ್ಯಸನ ನಿರ್ವಹಣೆಗಾಗಿ ಪೋಷಕರ ಗುಂಪು (PGMTA) ಎಂಬ ಹೆಸರಿನಲ್ಲಿ ಪ್ರತಿ ಶನಿವಾರ ಆನ್‌ಲೈನ್ ಮೂಲಕ ಈ ತರಬೇತಿ ನಡೆಯುತ್ತಿದೆ. ಜುಲೈ 2025ರಲ್ಲಿ ಆರಂಭವಾದ ಈ ಕಾರ್ಯಕ್ರಮಕ್ಕೆ ಅಪಾರ ಸ್ಪಂದನೆ ವ್ಯಕ್ತವಾಗಿದ್ದು, ಇದುವರೆಗೂ ಸುಮಾರು 5,500ಕ್ಕೂ ಹೆಚ್ಚು ಪೋಷಕರು ಇದರ ಪ್ರಯೋಜನ ಪಡೆದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಶಟ್ ಕ್ಲಿನಿಕ್ ಮುಖ್ಯಸ್ಥರಾದ ಡಾ. ಮನೋಜ್ ಶರ್ಮಾ,
“ಪ್ರತಿ ಆನ್‌ಲೈನ್ ಸೆಷನ್‌ಗೆ ಮೊದಲು ‘ಎಕ್ಸ್’ (ಟ್ವಿಟರ್), ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ನೀಡಲಾಗುತ್ತದೆ. ದೇಶದ ವಿವಿಧ ಭಾಗಗಳಿಂದ, ವಿಭಿನ್ನ ಸಾಮಾಜಿಕ–ಆರ್ಥಿಕ ಹಿನ್ನೆಲೆಯುಳ್ಳ ಸುಮಾರು 300ಕ್ಕೂ ಹೆಚ್ಚು ಪೋಷಕರು ಪ್ರತಿ ವಾರ ನೋಂದಣಿ ಮಾಡಿಕೊಳ್ಳುತ್ತಾರೆ. ಆದರೆ ತರಬೇತಿಯ ಗುಣಮಟ್ಟ ಹಾಗೂ ಪ್ರತಿಯೊಬ್ಬರ ಸಮಸ್ಯೆಗೆ ಸ್ಪಂದಿಸಲು, ಒಂದು ಸೆಷನ್‌ಗೆ ಕೇವಲ 50ರಿಂದ 60 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ,” ಎಂದು ತಿಳಿಸಿದ್ದಾರೆ.
ಪೋಷಕರ ಅಸಹಾಯಕತೆ ಮತ್ತು ಭಯ.!!
ಮಕ್ಕಳ ಕೈಯಿಂದ ಮೊಬೈಲ್ ದೂರ ಮಾಡುವುದು ಪೋಷಕರಿಗೆ ಸುಲಭದ ಕೆಲಸವಲ್ಲ.
“ಮಕ್ಕಳಿಗೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಮಿತ ಬಳಕೆಯ ಮಹತ್ವವನ್ನು ಮನವರಿಕೆ ಮಾಡಿಕೊಡುವುದೇ ಪೋಷಕರಿಗೆ ದೊಡ್ಡ ಸವಾಲಾಗಿದೆ. ಬುದ್ಧಿ ಹೇಳಿದರೆ ಮಕ್ಕಳು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ.
ಮೊಬೈಲ್ ಕೊಡದಿದ್ದರೆ ಊಟ ಮಾಡುವುದಿಲ್ಲ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸುವುದು, ಸುಳ್ಳು ಹೇಳುವುದು ಅಥವಾ ಆಕ್ರಮಣಕಾರಿ ವರ್ತನೆ ತೋರುವುದು ಮಕ್ಕಳಲ್ಲಿ ಹೆಚ್ಚುತ್ತಿದೆ. ಈ ಭಯದಿಂದ ಪೋಷಕರು ಅಸಹಾಯಕರಾಗುತ್ತಿದ್ದಾರೆ. ಇಂತಹ ಘಟನೆಗಳು ಅನೇಕ ಕುಟುಂಬಗಳಲ್ಲಿ ಗಂಭೀರ ಜಗಳಗಳಿಗೆ ಕಾರಣವಾಗುತ್ತಿವೆ ಮತ್ತು ಕೌನ್ಸಿಲಿಂಗ್ ಅವಶ್ಯಕತೆ ಉಂಟಾಗಿದೆ,” ಎಂದು ಡಾ. ಶರ್ಮಾ ವಿವರಿಸಿದರು
ಗೇಮಿಂಗ್ ಮತ್ತು ಅಶ್ಲೀಲತೆಯ ಚಟ.!?.
ಸಾಮಾಜಿಕ ಜಾಲತಾಣಗಳಷ್ಟೇ ಅಲ್ಲದೆ, ಆನ್‌ಲೈನ್ ಗೇಮಿಂಗ್ ಮತ್ತು ಕೆಲ ಸಂದರ್ಭಗಳಲ್ಲಿ ಅಶ್ಲೀಲ ದೃಶ್ಯ ವೀಕ್ಷಣೆಯ ಚಟವೂ ಮಕ್ಕಳನ್ನು ಆವರಿಸುತ್ತಿದೆ.
“ನಮ್ಮ ಬಳಿ ಬರುವ ಬಹುತೇಕ ಪ್ರಕರಣಗಳಲ್ಲಿ, ಹದಿಹರೆಯದ ಮಕ್ಕಳು ದಿನಕ್ಕೆ ಸುಮಾರು 10 ಗಂಟೆಗಳ ಕಾಲ ಮೊಬೈಲ್ ಸ್ಕ್ರೀನ್‌ಗೆ ಅಂಟಿಕೊಂಡಿರುತ್ತಾರೆ ಎಂದು ಪೋಷಕರು ದೂರುತ್ತಾರೆ. ಇದರಿಂದ ಕುಟುಂಬದವರೊಂದಿಗೆ ಸಂವಹನ ಕಡಿಮೆಯಾಗುತ್ತದೆ, ದೈಹಿಕ ಚಟುವಟಿಕೆಗಳ ಮೇಲೆ ಆಸಕ್ತಿ ಕುಸಿಯುತ್ತದೆ ಮತ್ತು ಸುತ್ತಮುತ್ತ ನಡೆಯುವ ಸಂಗತಿಗಳ ಅರಿವು ಇಲ್ಲದಂತಾಗುತ್ತದೆ. ಇದರ ಪರಿಣಾಮವಾಗಿ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುವುದರ ಜೊತೆಗೆ, ಭವಿಷ್ಯದ ಕುರಿತು ದೀರ್ಘಕಾಲೀನ ಗುರಿಗಳನ್ನು ರೂಪಿಸಿಕೊಳ್ಳುವುದಿಲ್ಲ,” ಎಂದು ಅವರು ಕಳವಳ ವ್ಯಕ್ತಪಡಿಸಿದರು.
ತರಬೇತಿಯಲ್ಲಿ ಒಳಗೊಂಡಿರುವ ಪ್ರಮುಖ ಅಂಶಗಳು….
ನಿಮ್ಹಾನ್ಸ್‌ನ ಈ ಆನ್‌ಲೈನ್ ತರಬೇತಿ ಕಾರ್ಯಕ್ರಮವು ಮುಖ್ಯವಾಗಿ ಮೂರು ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ:
ಸೈಬರ್ ಸಾಕ್ಷರತೆ:
ಪೋಷಕರಿಗೆ ತಂತ್ರಜ್ಞಾನ ಸಂಬಂಧಿತ ಅರಿವು, ಪ್ರೈವಸಿ ಸೆಟ್ಟಿಂಗ್‌ಗಳು, ಡೇಟಾ ಸೋರಿಕೆ ತಡೆಗಟ್ಟುವಿಕೆ ಹಾಗೂ ಸೈಬರ್ ಅಪಾಯಗಳಿಂದ ಮಕ್ಕಳನ್ನು ರಕ್ಷಿಸುವ ವಿಧಾನಗಳು.
ಆರೋಗ್ಯಕರ ಸಂವಹನ:
ಮಕ್ಕಳೊಂದಿಗೆ ಜಗಳವಾಡದೆ, ಶಾಂತಿಯುತ ಹಾಗೂ ಪರಿಣಾಮಕಾರಿಯಾಗಿ ಮಾತನಾಡುವ ಕೌಶಲ. ಸಂಘರ್ಷ ಪರಿಹಾರ
ಮೊಬೈಲ್ ಬಳಕೆಯ ವಿಚಾರವಾಗಿ ಮನೆಯಲ್ಲಿ ಉಂಟಾಗುವ ಗಲಾಟೆಗಳನ್ನು ಶಾಂತಿಯುತವಾಗಿ ಬಗೆಹರಿಸುವ ವಿಧಾನಗಳು.
“ಈ ಕೌಶಲಗಳನ್ನು ಒಂದೇ ಸೆಷನ್‌ನಲ್ಲಿ ಸಂಪೂರ್ಣವಾಗಿ ಕಲಿಯಲು ಸಾಧ್ಯವಿಲ್ಲ. ಪೋಷಕರು ಟಿಪ್ಪಣಿಗಳನ್ನು ಮಾಡಿಕೊಂಡು ಪ್ರತಿದಿನ ಅಭ್ಯಾಸ ಮಾಡಬೇಕು. ಅಗತ್ಯವಿದ್ದರೆ ಮತ್ತೆ ಸೆಷನ್‌ಗಳಿಗೆ ಹಾಜರಾಗಬೇಕು. ಹೊಸ ಸವಾಲುಗಳನ್ನು ಎದುರಿಸಲು ‘ಬೂಸ್ಟರ್ ಸೆಷನ್’ಗಳನ್ನೂ ನಡೆಸಲಾಗುತ್ತದೆ. ಜೊತೆಗೆ, ಪ್ರತಿ ಶುಕ್ರವಾರ ಪೋಷಕರಿಗಾಗಿ ಸಹಾಯವಾಣಿ ಸೇವೆಯೂ ಲಭ್ಯವಿದೆ,” ಎಂದು ಡಾ. ಶರ್ಮಾ ತಿಳಿಸಿದ್ದಾರೆ.
ನೋಂದಣಿ ಮಾಹಿತಿ…..
ನಿಮ್ಮ ಮಕ್ಕಳು ಮೊಬೈಲ್ ವ್ಯಸನಕ್ಕೆ ತುತ್ತಾಗಿದ್ದರೆ, ನಿಮ್ಹಾನ್ಸ್‌ನ ಸಾಮಾಜಿಕ ಜಾಲತಾಣಗಳನ್ನು ಫಾಲೋ ಮಾಡುವ ಮೂಲಕ ಮುಂದಿನ ಶನಿವಾರದ ಆನ್‌ಲೈನ್ ಸೆಷನ್‌ಗೆ ನೋಂದಣಿ ಮಾಡಿಕೊಳ್ಳಬಹುದು.
ಸಂಪರ್ಕ ವಿಳಾಸ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS)
ಹೊಸೂರು ರಸ್ತೆ, ಬೆಂಗಳೂರು – 560029
ಶಟ್ ಕ್ಲಿನಿಕ್ ಸಹಾಯವಾಣಿ: 094808 29670


