ಮಚ್ಚೂಸ್ ಟೀ ಮಾರ್ಟ್ ವತಿಯಿಂದ ರಂಝಾನ್ ಪ್ರಯುಕ್ತ ಸೇವಾ ಕಾರ್ಯ

ಸುಳ್ಯ, ಫೆ. 20: ಸುಳ್ಯದ ಮುಖ್ಯ ರಸ್ತೆಯ ಜನತಾ ಸ್ಟೋರ್ ಸಮೀಪದಲ್ಲಿರುವ ಸಮಾಜಸೇವಕ ಹಾಗೂ ಶಿಕ್ಷಣಪ್ರೇಮಿ ಮಶೂದ್ (ಮಚ್ಚು) ಅವರ ಮಾಲೀಕತ್ವದ ಮಚ್ಚೂಸ್ ಟೀ ಮಾರ್ಟ್ನಲ್ಲಿ ಪವಿತ್ರ ರಂಝಾನ್ ಉಪವಾಸ ತಿಂಗಳ ಪ್ರಯುಕ್ತ ಮೂರನೇ ವರ್ಷದ ಒಂದು ತಿಂಗಳ ಉಚಿತ ಇಫ್ತಾರ್ ಕೂಟಕ್ಕೆ ಫೆಬ್ರವರಿ 19ರಂದು ಚಾಲನೆ ನೀಡಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಉಪವಾಸದಲ್ಲಿರುವ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಇಫ್ತಾರ್ ಕೂಟದ ಪ್ರಯೋಜನ ಪಡೆಯುತ್ತಿದ್ದಾರೆ. ಸಾಯಂಕಾಲ ಉಪವಾಸ ತೆರೆಯುವ (ಇಫ್ತಾರ್) ವೇಳೆ ಖರ್ಜೂರ, ಹಣ್ಣುಗಳು, ಪಾನೀಯಗಳು ಸೇರಿದಂತೆ ವಿವಿಧ ಉಪಹಾರಗಳನ್ನು ಉಚಿತವಾಗಿ ವಿತರಿಸಲಾಯಿತು.
ಒಂದು ತಿಂಗಳ ಕಾಲ ನಡೆಯುವ ಈ ಉಚಿತ ಇಫ್ತಾರ್ ಕೂಟದ ಸದುಪಯೋಗವನ್ನು ಸಾರ್ವಜನಿಕರು, ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಕಾರ್ಯಕ್ರಮಕ್ಕೆ ಸ್ಥಳೀಯರು ಉತ್ತಮ ಸ್ಪಂದನೆ ವ್ಯಕ್ತಪಡಿಸಿದ್ದು, ಉಪವಾಸದಲ್ಲಿರುವವರಿಗೆ ಇದು ನೆರವಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಮಾಜದಲ್ಲಿ ಪರಸ್ಪರ ಸೌಹಾರ್ದತೆ ಮತ್ತು ಸಹಭಾಗಿತ್ವದ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಸ್ಥಳೀಯರು ಈ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದ್ದಾರೆ.


