ಗದಗ, ಫೆ. 21: ಗುತ್ತಿಗೆದಾರರೊಬ್ಬರಿಂದ ಕಮಿಷನ್ ಪಡೆಯುತ್ತಿದ್ದರೆಂಬ ಆರೋಪದ ಮೇರೆಗೆ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಕರ್ನಾಟಕ “ಲೋಕಾಯುಕ್ತ ಅಧಿಕಾರಿಗಳು ಶನಿವಾರ ಬಂಧಿಸಿದರು.”. ಈ ಘಟನೆ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದು, ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿದೆ.
ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಪಿಎಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಕ್ಲಾಸ್-1 ಗುತ್ತಿಗೆದಾರ ವಿಜಯ್ ಅವರ ಬಳಿ ಒಟ್ಟು 11 ಲಕ್ಷ ರೂ. ಕಮಿಷನ್ ಬೇಡಿಕೆ ಇಟ್ಟಿದ್ದರೆಂದು ಹೇಳಲಾಗಿದ್ದು, ಅದರ ಮುಂಗಡವಾಗಿ 5 ಲಕ್ಷ ರೂ. ಸ್ವೀಕರಿಸುವ ವೇಳೆ ಪಿಎಗಳಾದ ಮಂಜುನಾಥ್ ಮತ್ತು ಗುರು ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಶಕ್ಕೆ ಪಡೆದ ಬಳಿಕ ಅಧಿಕಾರಿಗಳು ಲಕ್ಷೇಶ್ವರದಲ್ಲಿರುವ ಚಂದ್ರು ಲಮಾಣಿ ಅವರಿಗೆ ಸಂಬಂಧಪಟ್ಟಂತೆ ಹೇಳಲಾಗುತ್ತಿರುವ ಬಾಲಾಜಿ ಆಸ್ಪತ್ರೆಯ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು. ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಹಲವು ಗಂಟೆಗಳ ಕಾಲ ಮುಂದುವರಿದಿದ್ದು, ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಈ ಪ್ರಕರಣದ ಹಿನ್ನೆಲೆ ರಾಜಕೀಯ ವಲಯದಲ್ಲಿ ಚರ್ಚೆಗಳು ಗರಿಗೆದರಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕ್ರಮಗಳು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.


