Featured, ಆರೋಗ್ಯ, ಇತರೆ, ಸ್ಥಳೀಯ

ಉಳ್ಳಾಲ ಸಮೀಪ ಹೃದಯವಿದ್ರಾವಕ ಘಟನೆ: ಲೂಡೊ ಕಾಯಿನ್ ನುಂಗಿ ಬಾಲಕಿ ಬಲಿ

ಶಾಲೆಗೆ ರಜೆ ದಿನದ ಆಟವೇ ಜೀವಪಾಯವಾಗಿ ಪರಿಣಮಿಸಿದ ದುರ್ಘಟನೆ 

ಉಳ್ಳಾಲ, ಫೆ. 22: ಸಹೋದರ–ಸಹೋದರಿಯರೊಂದಿಗೆ ಮನೆಯಲ್ಲಿ ಲೂಡೊ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕಿ ಆಟದ ಪ್ಲಾಸ್ಟಿಕ್ ಕಾಯಿನ್ ನುಂಗಿ ಉಸಿರುಗಟ್ಟಿ ಮೃತಪಟ್ಟ ದುರ್ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ  ಫೆ.21 ರ ಮಧ್ಯಾಹ್ನ ಸಂಭವಿಸಿದೆ.

ಮೃತ ಬಾಲಕಿಯನ್ನು ತನುಷ್ಕ (8) ಎಂದು ಗುರುತಿಸಲಾಗಿದೆ. ಇವರು ಮೂಲತಃ ಕಾಸರಗೋಡು ಜಿಲ್ಲೆಯ ಮಧೂರು ಉಳಿಯತಡ್ಕ ನಿವಾಸಿಗಳಾದ ರಾಜೇಶ್ ಗಟ್ಟಿ ಮತ್ತು ರಾಜೇಶ್ವರಿ ದಂಪತಿಯ ಎರಡನೇ ಪುತ್ರಿ. ತನುಷ್ಕ ಅವರ ತಾಯಿ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಉದ್ಯೋಗದ ಸೌಕರ್ಯಕ್ಕಾಗಿ ಕುಟುಂಬ ಸಮೇತ ಕೊಲ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ತನುಷ್ಕ ತನ್ನ ಅಣ್ಣ ಹಾಗೂ ತಂಗಿಯೊಂದಿಗೆ ಮನೆಯಲ್ಲಿ ಲೂಡೊ ಆಟವಾಡುತ್ತಿದ್ದಳು. ಈ ವೇಳೆ ಆಟದಲ್ಲಿ ಬಳಸುವ ಹೊಸ ಶಂಕು ಆಕಾರದ ಪ್ಲಾಸ್ಟಿಕ್ ಕಾಯಿನ್ ಅನ್ನು ಅಜಾಗರೂಕತೆಯಿಂದ ಬಾಯಿಗೆ ಹಾಕಿ ನುಂಗಿದ್ದಾಳೆ. ಇದರಿಂದ ತಕ್ಷಣವೇ ಉಸಿರುಗಟ್ಟಿದ ಸ್ಥಿತಿಗೆ ತಲುಪಿದ ಬಾಲಕಿಯನ್ನು ತಾಯಿ ಹಾಗೂ ನೆರೆಹೊರೆಯವರ ಸಹಾಯದಿಂದ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಆಕೆಯನ್ನು ಮೃತ ಎಂದು ಘೋಷಿಸಿದರು
ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಕಾಯಿನ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ತನುಷ್ಕ ತೊಕ್ಕೊಟ್ಟಿನ ಸಂತ ಸೆಬಾಸ್ಟಿಯನ್ ಹೈಸ್ಕೂಲ್‌ನಲ್ಲಿ ಎರಡನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿನಿ ಎಂದೇ ಪರಿಚಿತರಾಗಿದ್ದಳು. ಆಕೆಯ ಆಕಸ್ಮಿಕ ಸಾವಿನಿಂದ ಪೋಷಕರು ಹಾಗೂ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಚಿಕ್ಕ ಮಕ್ಕಳಿಗೆ ಸಣ್ಣ ಗಾತ್ರದ ಆಟಿಕೆಗಳು, ಕಾಯ್ಸ್, ಬಟನ್‌ಗಳು ಮುಂತಾದವುಗಳನ್ನು ಬಳಸುವಾಗ ವಿಶೇಷ ಗಮನ ವಹಿಸುವುದು ಅಗತ್ಯ. ಮಕ್ಕಳಿಗೆ ಆಟದ ವೇಳೆ ನಿರಂತರ ಮೇಲ್ವಿಚಾರಣೆ, ವಯೋಮಾನದ ಅನುಗುಣವಾದ ಸುರಕ್ಷಿತ ಆಟಿಕೆಗಳ ಬಳಕೆ ಹಾಗೂ ಉಸಿರುಗಟ್ಟುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವುದು ಇಂತಹ ಅನಾಹುತಗಳನ್ನು ತಪ್ಪಿಸಲು ಸಹಕಾರಿ.

 

Related Posts