ಬಂಟ್ವಾಳ: ಕೊಳ್ಳಾಡು ಗ್ರಾಮದ ತಾಳಿತ್ತನೂಜಿ ದೇವಸ್ಯ ನಿವಾಸಿ ಅಬೂಬಕ್ಕರ್ ಅವರ ಮಗಳು ಅಸ್ಮ ಅವರ ಮಗ ಸುಮಾರು 12 ವರ್ಷದ ಆಸೀಪ್ ಸೈಕಲ್ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ದುರ್ಘಟನೆ ಇಂದು ಸಂಜೆ ಸಂಭವಿಸಿದೆ.
ಮದರಸದಲ್ಲಿ ಆಯೋಜಿಸಲಾದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮನೆಗೆ ಸೈಕಲ್ನಲ್ಲಿ ಹಿಂತಿರುಗುತ್ತಿದ್ದ ವೇಳೆ ರಸ್ತೆಯ ತಿರುವಿನಲ್ಲಿ ಅಕಸ್ಮಾತ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಬಾಲಕನಿಗೆ ದೇಹದ ಒಳಭಾಗದಲ್ಲಿ ತೀವ್ರ ಪೆಟ್ಟು ತಗುಲಿದೆಯೆಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಆಸೀಪ್ನನ್ನು ತಕ್ಷಣ ಚಿಕಿತ್ಸೆಗಾಗಿ ತುಂಬೆಯ ಪಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಳಿತ್ತನೂಜಿಯ ವಿದ್ಯಾರ್ಥಿಯಾಗಿದ್ದ ಆಸೀಪ್ ಶಾಲೆಯ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಪ್ರತಿಭಾವಂತ ಬಾಲಕನಾಗಿದ್ದನು ಎಂದು ತಿಳಿದುಬಂದಿದೆ.
ತಾಯಿಗೆ ಏಕೈಕ ಮಗನಾಗಿದ್ದ ಆಸೀಪ್ನ ಅಕಾಲಿಕ ನಿಧನವು ಕುಟುಂಬದವರನ್ನು ತೀವ್ರ ಶೋಕಕ್ಕೀಡು ಮಾಡಿದ್ದು, ಬಂಧುಬಳಗ ಹಾಗೂ ಗ್ರಾಮಸ್ಥರಲ್ಲೂ ದುಃಖದ ವಾತಾವರಣ ನಿರ್ಮಾಣವಾಗಿದೆ. ಬಾಲಕನ ನಿಧನಕ್ಕೆ ಸ್ಥಳೀಯರು ಸಂತಾಪ ಸೂಚಿಸಿದ್ದಾರೆ


