Featured, ಅಂತರಾಜ್ಯ, ಇತರೆ, ಸ್ಥಳೀಯ

ದೇಶದ ಗಮನ ಸೆಳೆದ ಗ್ರಾಮೀಣ ಭಾಗದ ವಿದ್ಯಾಸಂಸ್ಥೆ : ಯುಪಿಎಸ್ಸಿಯಲ್ಲಿ 382ನೇ ರ್ಯಾಂಕ್‌ ಪಡೆದ ಕುನಿಯ ಐಎಎಸ್ ಅಕಾಡೆಮಿ ವಿದ್ಯಾರ್ಥಿ ಮೊಹಮದ್ ಅಶ್ಮಿಲ್ ಶಾಹ್ ಹುದವಿ

ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮೊಹಮದ್ ಅಶ್ಮಿಲ್ ಶಾಹ್ ಹುದವಿ ಯುವಜನತೆಗೆ ಮಾದರಿಯಾಗಿದ್ದಾರೆ. ಸಾಧನೆ ಮಾಡುವ ಛಲ ಮತ್ತು ದೃಢಸಂಕಲ್ಪ ಇದ್ದರೆ ಯಶಸ್ಸು ಖಂಡಿತ ಸಿಗುತ್ತದೆ ಎಂಬುದನ್ನು ಅಶ್ಮಿಲ್ ಶಾಹ್ ತಮ್ಮ ಸಾಧನೆಯ ಮೂಲಕ ತೋರಿಸಿದ್ದಾರೆ ಅವರ ಈ ಮಟ್ಟದ ಸಾಧನೆಗೆ ಚೆಮ್ಮಾಡಿನ ದಾರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಹಾಗೂ ಕುನಿಯ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಐಎಎಸ್ ಅಕಾಡೆಮಿಯ ಮಹತ್ವದ ಪಾತ್ರವಿದೆ : ಟಿ.ಎಂ. ಶಾಹಿದ್ ತೆಕ್ಕಿಲ್

ಕಾಸರಗೋಡು:
ಯುಪಿಎಸ್ಸಿ ಪರೀಕ್ಷೆಯಲ್ಲಿ 382ನೇ ರ್ಯಾಂಕ್‌ ಪಡೆದು ಸಾಧನೆ ಮಾಡಿದ ಮೊಹಮದ್ ಅಶ್ಮಿಲ್ ಶಾಹ್ ಹುದವಿ ಅವರಿಗೆ ಕುನಿಯ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಐಎಎಸ್ ಅಕಾಡೆಮಿಯ ವತಿಯಿಂದ ಕುನಿಯ ಕ್ಯಾಂಪಸ್‌ನಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಯುವಕರಿಗೆ ಮಾದರಿಯಾಗಿರುವ ಈ ಸಾಧಕನನ್ನು ಗೌರವಿಸುವ ಮೂಲಕ ಸಂಸ್ಥೆ ತನ್ನ ಶಿಕ್ಷಣ ಸೇವೆಯ ಮತ್ತೊಂದು ಮೈಲುಗಲ್ಲು ಸಾಧಿಸಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಶ್ಮಿಲ್ ಶಾಹ್ ಹುದವಿ ಅವರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ಅಶ್ಮಿಲ್ ಶಾಹ್ ಹುದವಿ ಈ ಮಟ್ಟಕ್ಕೆ ಬೆಳೆಯಲು ಚೆಮ್ಮಾಡಿನ ದಾರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಹಾಗೂ ಕುನಿಯ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಐಎಎಸ್ ಅಕಾಡೆಮಿಯ ಮಹತ್ವದ ಪಾತ್ರವಿದೆ ಎಂದು ಹೇಳಿದರು.

ಕುನಿಯ ಇಬ್ರಾಹಿಂ ಅಹ್ಮದ್ ಅಲಿ ಹಾಜಿಯವರ ದೂರದೃಷ್ಟಿಯಿಂದ ಸ್ಥಾಪಿತವಾದ ಈ ಸಂಸ್ಥೆ ಕೇವಲ ಎರಡು ವರ್ಷಗಳಲ್ಲೇ ಉತ್ತಮ ಫಲಿತಾಂಶ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರು ಉನ್ನತ ಹುದ್ದೆಗಳನ್ನು ಅಲಂಕರಿಸುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಅಶ್ಮಿಲ್ ಶಾಹ್ ಹುದವಿ ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಪಡೆಯುವ ಆಶಯ ಹೊಂದಿದ್ದು, ಅದು ದೊರೆತರೆ ವಿಶ್ವದ ವಿವಿಧ ದೇಶಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ. ಇಲ್ಲದಿದ್ದರೆ ಐಎಎಸ್ ಅಧಿಕಾರಿಯಾಗಿ ದೇಶದ ವಿವಿಧ ಭಾಗಗಳಲ್ಲಿ ಸೇವೆ ಮಾಡುವ ಅವಕಾಶ ದೊರೆಯಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಡವರು ಹಾಗೂ ತುಳಿತಕ್ಕೊಳಗಾದವರ ಬಗ್ಗೆ ವಿಶೇಷ ಕಾಳಜಿ ವಹಿಸಿ ಸೇವೆ ಸಲ್ಲಿಸುವಂತೆ ಸಲಹೆ ನೀಡಿದರು. ಜೊತೆಗೆ ಕುನಿಯದಲ್ಲಿ ಐಎಎಸ್ ಅಕಾಡೆಮಿ ಹಾಗೂ ಬೃಹತ್ ಸಮೂಹ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕರಾವಳಿ ಕರ್ನಾಟಕ ಹಾಗೂ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ಕುನಿಯ ಇಬ್ರಾಹಿಂ ಅಹ್ಮದ್ ಅಲಿ ಹಾಜಿಯವರನ್ನು ಶ್ಲಾಘಿಸಿದರು. ಅವರ ಪ್ರಯತ್ನದಿಂದ ಕುನಿಯ ಎಂಬ ಸಣ್ಣ ಊರು ಪ್ರಪಂಚದ ಭೂಪಟದಲ್ಲಿ ಗುರುತಿಸಿಕೊಂಡಿದೆ ಎಂದರು.
ಸಮಾರಂಭದಲ್ಲಿ ಕಣ್ಣೂರು ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಹಾಗೂ ಕುನಿಯ ಸಂಸ್ಥೆಯ ಸಲಹೆಗಾರ ಡಾ. ಖಾದರ್ ಮಾಂಘಾಡ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸಿ.ಎಚ್. ಕುಂಜಂಬು, ಎ.ಕೆ.ಎಂ. ಅಶ್ರಫ್, ಬಿಹಾರದ ಮುಜಾಫರ್ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಬುಲ್ಲಾ ಅನ್ಸಾರಿ ಐಪಿಎಸ್, ಕಾಸರಗೋಡು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಶಿವಂ ಐಪಿಎಸ್, ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲ ಕುನ್ಹಿ, ಪೆರಿಯ ಪಂಚಾಯತ್ ಅಧ್ಯಕ್ಷೆ ಡಾ. ಸಬಿತ, ಪಳ್ಳಿಕ್ಕೆರೆ ಪಂಚಾಯತ್ ಅಧ್ಯಕ್ಷೆ ಶೋಭನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ವೇಳೆ ಶಿಬಿಲಿ ಶಹಾದತಿ ಅವರು ಕುನಿಯ ಐಎಎಸ್ ಅಕಾಡೆಮಿ ಹಾಗೂ ಶಿಕ್ಷಣ ಸಂಸ್ಥೆಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಡಾ. ಲಕ್ಷ್ಮೀ ಭಾಯಿ ಸ್ವಾಗತಿಸಿದರು. ಅಜ್ಮಲ್ ವಂದಿಸಿದರು.
ಕಾರ್ಯಕ್ರಮದ ಬಳಿಕ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾಧಕರೊಂದಿಗೆ ಸಾಮೂಹಿಕ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು. ಉತ್ತಮ ಶಿಕ್ಷಣ, ಮಾರ್ಗದರ್ಶನ ಹಾಗೂ ಮೌಲ್ಯಾಧಾರಿತ ತರಬೇತಿ ನೀಡುವ ಮೂಲಕ ಕುನಿಯ ಸಮೂಹ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸುತ್ತಿದೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

 

Related Posts