Featured, ಇತರೆ, ಸ್ಥಳೀಯ

ಕೇರಳ : ಮಲಬಾರ್‌ನಲ್ಲಿ ಟಿ.ಎಂ. ಶಾಹಿದ್ ತೆಕ್ಕಿಲ್ ಬಿರುಸಿನ ಪ್ರಚಾರ: “ಯುಡಿಎಫ್ ಸರಕಾರ ಖಚಿತ”

ಇರಾನ್-ಭಾರತ ಸ್ನೇಹ ಸಂಬಂಧದ ವಿದೇಶಾಂಗ ನೀತಿಯನ್ನು ಹಾಳು ಮಾಡಲಾಗಿದೆ : ಟಿ.ಎಂ. ಶಾಹಿದ್ ತೆಕ್ಕಿಲ್

ಕೇರಳದ ಮಲಬಾರ್ ಪ್ರಾಂತ್ಯದಲ್ಲಿ ಚುನಾವಣಾ ಕಣ ರಂಗೇರಿದ್ದು, ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಟಿ.ಎಂ. ಶಾಹಿದ್ ತೆಕ್ಕಿಲ್ ಕಳೆದ ನಾಲ್ಕು ದಿನಗಳಿಂದ ಬಿರುಸಿನ ಪ್ರಚಾರ ಕಾರ್ಯ ನಡೆಸಿದ್ದಾರೆ. ಪಾದಯಾತ್ರೆ, ಮನೆ-ಮನೆ ಭೇಟಿ ಹಾಗೂ ಸಾರ್ವಜನಿಕ ಸಭೆಗಳ ಮೂಲಕ ಮತದಾರರನ್ನು ಸೆಳೆಯುವಲ್ಲಿ ಅವರು ತೊಡಗಿದ್ದಾರೆ.

ಪ್ರಚಾರದ ವೇಳೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಜಾರಿಯಲ್ಲಿರುವ ಐದು ಗ್ಯಾರಂಟಿ ಯೋಜನೆಗಳನ್ನು ಕೇರಳದಲ್ಲೂ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು. “ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಬಿಜೆಪಿಯೇ ಇಂದು ಇತರ ರಾಜ್ಯಗಳಲ್ಲಿ ಅದನ್ನೇ ಅನುಸರಿಸುತ್ತಿದೆ. ಕರ್ನಾಟಕದಲ್ಲಿ ಈ ಯೋಜನೆಗಳು ಯಶಸ್ವಿಯಾಗಿ ಜಾರಿಗೆ ಬಂದು, ವಾರ್ಷಿಕ ಸುಮಾರು ₹56 ಸಾವಿರ ಕೋಟಿ ನೇರವಾಗಿ ಜನತೆಗೆ ತಲುಪಿದೆ” ಎಂದು ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇರಾನ್-ಭಾರತ ಸ್ನೇಹ ಸಂಬಂಧದ ವಿದೇಶಾಂಗ ನೀತಿಯನ್ನು ಹಾಳು ಮಾಡಲಾಗಿದೆ ಎಂದು ಟೀಕಿಸಿದರು. ದೇಶದಲ್ಲಿ ಗ್ಯಾಸ್ ಬೆಲೆ ಏರಿಕೆ, ದುಬಾರಿ ಜೀವನ ವೆಚ್ಚ ಮತ್ತು ನಿರುದ್ಯೋಗ ಸಮಸ್ಯೆಗಳು ಗಂಭೀರವಾಗಿದ್ದು, ಕೇಂದ್ರ ಹಾಗೂ ಕೇರಳ ರಾಜ್ಯ ಸರ್ಕಾರಗಳ ಆಡಳಿತ ಜನವಿರೋಧಿ ಹಾಗೂ ಬಂಡವಾಳಶಾಹಿಗಳ ಪರವಾಗಿದೆ ಎಂದು ಆರೋಪಿಸಿದರು.

ಮುಂದಿನ ದಿನಗಳಲ್ಲಿ ಕೇರಳದಲ್ಲಿ ಜನಪರ ಮತ್ತು ಸುಭದ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮತದಾರರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಕೆಳಗಿಳಿಸಲು ಸಜ್ಜಾಗಿದ್ದಾರೆ ಎಂದರು. ಜೊತೆಗೆ, ಕೇಂದ್ರದ ಹೊಸ ನಾಲ್ಕು ಕಾರ್ಮಿಕ ಕೋಡ್‌ಗಳನ್ನು ಖಂಡಿಸಿ, ಕಾರ್ಮಿಕರ ಹಕ್ಕುಗಳನ್ನು ಕಡಿಮೆ ಮಾಡುವ ನೀತಿಗಳನ್ನು ತೀವ್ರವಾಗಿ ವಿರೋಧಿಸಿದರು. ಕರ್ನಾಟಕದಲ್ಲಿ ಕಾರ್ಮಿಕರ ಹಿತಾಸಕ್ತಿ ಕಾಪಾಡಲಾಗಿದೆ ಎಂದು ಅವರು ತಿಳಿಸಿದರು.
ಈ ವೇಳೆ, ಅವರು ಬೇಪೂರು ಕ್ಷೇತ್ರದ ಅಭ್ಯರ್ಥಿ ಅನ್ವರ್, ಕ್ಯಾಲಿಕಟ್ ದಕ್ಷಿಣದ ಜಯಂತ್, ಕ್ಯಾಲಿಕಟ್ ಉತ್ತರದ ಫೈಸಲು ಬಾಬು, ಎಲತ್ತೂರು ಕ್ಷೇತ್ರದ ಶ್ರೀಮತಿ ವಿದ್ಯಾ ಬಾಲಕೃಷ್ಣನ್ ಹಾಗೂ ನಾದಾಪುರಂ ಕ್ಷೇತ್ರದ ಕೆ.ಎಂ. ಅಭಿಜಿತ್ ಅವರ ಪರವಾಗಿ ಪ್ರಚಾರ ನಡೆಸಿ, ಕಾರ್ಯಕರ್ತರು ತೊಡಗಿಸಿಕೊಳ್ಳಲು ಕರೆ ನೀಡಿದರು. ಕಾಂಗ್ರೆಸ್ ಹಾಗೂ ಯುಡಿಎಫ್ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮತದಾರರಲ್ಲಿ ವಿನಂತಿಸಿದರು.
ಪ್ರಚಾರ ಕಾರ್ಯಕ್ರಮಗಳಲ್ಲಿ ಯುಡಿಎಫ್ ನಾಯಕರು ರಾಖೇಶ್ ಕೃಷ್ಣ, ವಿದ್ಯಾ ಬಾಲಕೃಷ್ಣನ್, ನ್ಯಾಯವಾದಿ ಆದಿಲ್ ಅಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ಸುಬ್ರಮಣ್ಯಮ್, ಮಾಹಿನ್ ಹಾಜಿ, ಅಬ್ದುಲ್ ಹಮೀದ್ ಬಪೂಟ್ಟಿ, ಸನೂಜ್ ಕರುವತ್ತೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
m

Related Posts