ವಿಶಾಖಪಟ್ಟಣಂ (ಏ.08):
ಕ್ರಿಕೆಟ್‌ನಲ್ಲಿ ಅಂಪೈರ್ ತೀರ್ಪು ಅಂತಿಮ ಎನ್ನಲಾಗುತ್ತದಾದರೂ, ಕೆಲವೊಮ್ಮೆ ಅದೇ ತೀರ್ಪು ವಿವಾದಕ್ಕೆ ಕಾರಣವಾಗಿ ಭೀಕರ ಘಟನೆಗಳಿಗೆ ದಾರಿ ಮಾಡಿಕೊಡುತ್ತದೆ. ಇಂತಹ ದಾರುಣ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದ್ದು, ರನೌಟ್ ತೀರ್ಪಿನ ಕುರಿತ ವಿವಾದ ಕೊನೆಗೆ ಅಂಪೈರ್ ಜೀವವನ್ನೇ ಕಸಿದುಕೊಂಡಿದೆ.
ಸ್ಥಳೀಯ ಕ್ರಿಕೆಟ್ ಟೂರ್ನಿಯೊಂದರಲ್ಲಿ ಈ ದುರ್ಘಟನೆ ನಡೆದಿದೆ. ಪಂದ್ಯ ರೋಚಕ ಹಂತ ತಲುಪಿದ ವೇಳೆ ಬ್ಯಾಟ್ಸ್‌ಮನ್ ರನೌಟ್ ಆಗಿದ್ದು, ಅಂಪೈರ್ ಅಜಿತ್ ಬಾಬು ನೀಡಿದ ತೀರ್ಪು ಆಟಗಾರರು ಮತ್ತು ಪ್ರೇಕ್ಷಕರಲ್ಲಿ ಅಸಮಾಧಾನ ಹುಟ್ಟಿಸಿತು. ಇದರಿಂದ ಮೈದಾನದಲ್ಲೇ ವಾಗ್ವಾದ ತಾರಕಕ್ಕೇರಿತು. ಪರಿಸ್ಥಿತಿಯನ್ನು ಸಮಾಧಾನಪಡಿಸಲು ಅಜಿತ್ ಬಾಬು ಹಾಗೂ ಮತ್ತೊಬ್ಬ ಅಂಪೈರ್ ಬುಡುಮುರಿ ಚಿರಂಜೀವಿ ಪ್ರಯತ್ನಿಸಿ, ಪಂದ್ಯವನ್ನು ಮುಂದುವರಿಸಿದರು.
ಆದರೆ, ಈ ವಿವಾದ ಪಂದ್ಯ ಮುಗಿದ ಬಳಿಕ ಮತ್ತಷ್ಟು ತೀವ್ರಗೊಂಡಿತು. ಪಂದ್ಯ ವೀಕ್ಷಿಸುತ್ತಿದ್ದ ಕಾಂತಾ ಕಿಶೋರ್ ಎಂಬ ವ್ಯಕ್ತಿ ರನೌಟ್ ತೀರ್ಪಿನಿಂದ ಆಕ್ರೋಶಗೊಂಡು, ಅಂಪೈರ್‌ರನ್ನು ಸಂಪರ್ಕಿಸಿ ವಿಷಯವನ್ನು ಬಗೆಹರಿಸಿಕೊಳ್ಳಲು ಬೇರೆ ಸ್ಥಳಕ್ಕೆ ಬರಲು ಹೇಳಿದ್ದಾನೆ. ವಿವಾದವನ್ನು ಶಾಂತಿಯುತವಾಗಿ ಮುಗಿಸಲು ಇಬ್ಬರು ಅಂಪೈರ್‌ಗಳು ಆ ಸ್ಥಳಕ್ಕೆ ತೆರಳಿದರು.
ಆದರೆ, ಪೂರ್ವನಿಯೋಜಿತವಾಗಿ ದಾಳಿಗೆ ಸಜ್ಜಾಗಿದ್ದ ಕಾಂತಾ ಕಿಶೋರ್, ಅಂಪೈರ್‌ಗಳು ಬಂದ ಕೂಡಲೇ ಹಠಾತ್ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಈ ವೇಳೆ ಅಜಿತ್ ಬಾಬು ಗಂಭೀರವಾಗಿ ಗಾಯಗೊಂಡರೆ, ತಡೆಯಲು ಬಂದ ಚಿರಂಜೀವಿಗೂ ಗಾಯಗಳಾಗಿವೆ.
ಗಾಯಗೊಂಡ ಅಜಿತ್ ಬಾಬು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಗಂಭೀರ ಗಾಯಗಳಿಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆ ಕ್ರಿಕೆಟ್ ವಲಯದಲ್ಲಿ ಆಘಾತ ಮೂಡಿಸಿದ್ದು, ಕ್ರೀಡಾಂಗಣದಲ್ಲಿ ಉಂಟಾಗುವ ಉದ್ವಿಗ್ನತೆ ಎಷ್ಟು ಭಯಾನಕ ಪರಿಣಾಮ ತರುತ್ತದೆ ಎಂಬುದಕ್ಕೆ ಇದು ದಾರುಣ ಉದಾಹರಣೆಯಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.





m
