ಸುಳ್ಯ ನಗರದಲ್ಲಿ ಚರಂಡಿ ಮತ್ತು ಕಾಲುವೆಗಳ ಮಲಿನ ನೀರು ನದಿ–ಹೊಳೆಗೆ ಸೇರುತ್ತಿರುವ ಸಮಸ್ಯೆ ಹಿನ್ನೆಲೆಯಲ್ಲಿ, ಐ & ಡಿ ತಂತ್ರಜ್ಞಾನ ಆಧಾರಿತ ಮಿನಿ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲು ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ ಅವರು ಸಚಿವ ಭೈರತಿ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಈ ಯೋಜನೆ ಜಾರಿಗೆ ತರಲು ಅನುದಾನ ನೀಡುವಂತೆ ವಿನಂತಿಸಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ತಜ್ಞರ ತಂಡವನ್ನು ಪರಿಶೀಲನೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.

ಸುಳ್ಯ: ಏತ್ತರ–ತಗ್ಗುಗಳಿಂದ ಕೂಡಿದ ಭೌಗೋಳಿಕ ವಿನ್ಯಾಸ ಹೊಂದಿರುವ ಸುಳ್ಯ ನಗರದಲ್ಲಿ ಪಯಶ್ವಿನಿ ನದಿ, ಕಂಡಡ್ಕ ಹೊಳೆ ಹಾಗೂ ಕನಿಕರಪಳ್ಳ ಹಳ್ಳ ಹರಿದು ಹೋಗುತ್ತಿದ್ದು, ಮಲಿನ ನೀರುಗಳು ಈ ಜಲಮೂಲಗಳಿಗೆ ಸೇರುತ್ತಿರುವ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೂಕ್ತ ಶುದ್ಧೀಕರಣ ವ್ಯವಸ್ಥೆ ಕಲ್ಪಿಸುವಂತೆ ಮನವಿ ಸಲ್ಲಿಸಲಾಗಿದೆ.
ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ಅವರು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ್ ಅವರಿಗೆ ಮನವಿ ನೀಡಿ, ಚರಂಡಿ ಮತ್ತು ಕಾಲುವೆಗಳಲ್ಲಿ ಹರಿಯುವ ಮಲಿನ ನೀರುಗಳು ಹೊಳೆ–ನದಿಗಳಿಗೆ ಸೇರುವ ಪ್ರಮುಖ ನಾಲ್ಕೈದು ಸ್ಥಳಗಳಲ್ಲಿ ಐ & ಡಿ ತಂತ್ರಜ್ಞಾನ ಆಧಾರಿತ ಮಿನಿ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದರು. ಈ ಯೋಜನೆಯನ್ನು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ, ಕಡಿಮೆ ಜಾಗದಲ್ಲಿ ನಿರ್ಮಿಸಬಹುದಾದ ರೀತಿಯಲ್ಲಿ ಅನುಷ್ಠಾನಗೊಳಿಸಲು ಅನುದಾನ ಒದಗಿಸುವಂತೆ ಅವರು ಮನವಿ ಮಾಡಿದರು.
ಈಗಾಗಲೇ ಕೆಯುಡಬ್ಲ್ಯೂಎಸ್ ಮಾರ್ಗದರ್ಶನದಲ್ಲಿ ಕೆಯುಐಡಿಎಫ್‌ಸಿ ಮೂಲಕ ರಾಜ್ಯದ ವಿವಿಧ ನಗರಗಳಲ್ಲಿ ಇಂತಹ ಯೋಜನೆಗಳು ಯಶಸ್ವಿಯಾಗಿ ಜಾರಿಗೆ ಬಂದಿರುವುದನ್ನು ಉಲ್ಲೇಖಿಸಿದ ಅವರು, ಶಿಕ್ಷಣ ಕಾಶಿ ಎಂದೇ ಖ್ಯಾತಿ ಪಡೆದಿರುವ, ರಬ್ಬರ್ ಮತ್ತು ಅಡಿಕೆ ವಾಣಿಜ್ಯ ಕೇಂದ್ರವಾಗಿರುವ ಹಾಗೂ ಕೊಡಗು ಜಿಲ್ಲೆ–ಕೇರಳ ಗಡಿ ಭಾಗದಲ್ಲಿರುವ ಸುಳ್ಯ ನಗರಕ್ಕೂ ಇದೇ ಮಾದರಿಯ ಯೋಜನೆ ಅತ್ಯಾವಶ್ಯಕ ಎಂದು ವಿವರಿಸಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಭೈರತಿ ಸುರೇಶ್ ಅವರು, ಸುಳ್ಯ ನಗರವನ್ನು ಈ ಯೋಜನಾ ನೆಟ್‌ವರ್ಕ್‌ನಲ್ಲಿ ಸೇರಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹಾಗೂ ಸ್ಥಳ ಪರಿಶೀಲನೆಗಾಗಿ ತಜ್ಞರ ತಂಡವನ್ನು ಕಳುಹಿಸುವುದಾಗಿ ಭರವಸೆ ನೀಡಿದರು.





m

