Featured, ಇತರೆ, ಸ್ಥಳೀಯ

ಖಾತೆದಾರರು ಖುದ್ದಾಗಿ ಹಾಜರಾಗಬೇಕು ಎಂದು ಬ್ಯಾಂಕ್ ಒತ್ತಾಯ: ಸಹೋದರಿಯ ಅಸ್ಥಿಪಂಜರ ಹೊತ್ತು 3 ಕಿಮೀ ನಡೆದು ಬ್ಯಾಂಕ್‌ಗೆ ಬಂದ ಸಹೋದರ”

ಕಿಯೋಂಜಾರ್, ಏಪ್ರಿಲ್ 28:
ಒಡಿಶಾ ರಾಜ್ಯದ ಕಿಯೋಂಜಾರ್ ಜಿಲ್ಲೆಯಲ್ಲಿ ಮಾನವೀಯತೆಯನ್ನು ಪ್ರಶ್ನಿಸುವಂತೊಂದು ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ತನ್ನ ಮೃತ ಸಹೋದರಿಯ ಬ್ಯಾಂಕ್ ಹಣ ಪಡೆಯಲು ವ್ಯಕ್ತಿಯೊಬ್ಬರು ಆಕೆಯ ಅಸ್ಥಿಪಂಜರವನ್ನು ಹೊತ್ತು 3 ಕಿಲೋಮೀಟರ್ ನಡೆದು ಬ್ಯಾಂಕ್‌ಗೆ ಬಂದ ಘಟನೆ ಎಲ್ಲರನ್ನೂ ದಿಗ್ಭ್ರಮೆಗೆ ಗುರಿಪಡಿಸಿದೆ.
ಡಯಾನಾಲಿ ಗ್ರಾಮದ ನಿವಾಸಿ ಜಿತು ಮುಂಡಾ ಅವರ ಸಹೋದರಿ ಕಾಕ್ರಾ ಮುಂಡಾ ಎರಡು ತಿಂಗಳ ಹಿಂದೆ ನಿಧನರಾಗಿದ್ದರು. ಕಾಕ್ರಾ ಅವರ ಪತಿ ಮತ್ತು ಮಗು ಮೊದಲೇ ಮೃತಪಟ್ಟಿದ್ದರಿಂದ, ಜಿತು ಅವರೇ ಏಕೈಕ ಸಂಬಂಧಿಯಾಗಿದ್ದರು.
ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆಯಲು ಜಿತು ಅವರು ಬ್ಯಾಂಕ್‌ಗೆ ಭೇಟಿ ನೀಡಿದಾಗ, ಖಾತೆದಾರರು ಖುದ್ದಾಗಿ ಹಾಜರಾಗಬೇಕು ಅಥವಾ ಕಾನೂನುಬದ್ಧ ಉತ್ತರಾಧಿಕಾರ ದಾಖಲೆಗಳನ್ನು ಸಲ್ಲಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಶಿಕ್ಷಣವಿಲ್ಲದ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದ ಜಿತು ಅವರಿಗೆ ಮರಣ ಪ್ರಮಾಣಪತ್ರ ಅಥವಾ ಉತ್ತರಾಧಿಕಾರ ಪತ್ರ ಪಡೆಯುವ ವಿಧಾನಗಳ ಬಗ್ಗೆ ತಿಳಿದಿರಲಿಲ್ಲ.
ಜೀವನ ಸಾಗಿಸಲು ಹಣ ಅತ್ಯಾವಶ್ಯಕವಾಗಿದ್ದ ಕಾರಣ, ಬೇರೆ ದಾರಿ ಕಾಣದ ಜಿತು ಅವರು ಸೋಮವಾರ ಆಘಾತಕಾರಿ ನಿರ್ಧಾರ ಕೈಗೊಂಡರು. ಗ್ರಾಮದ ಸ್ಮಶಾನಕ್ಕೆ ತೆರಳಿ ಸಹೋದರಿಯ ಅವಶೇಷಗಳನ್ನು ಹೊರತೆಗೆದು, ಅಸ್ಥಿಪಂಜರವನ್ನು ಬಟ್ಟೆಯಲ್ಲಿ ಸುತ್ತಿ ಭುಜದ ಮೇಲೆ ಹೊತ್ತುಕೊಂಡು ಸುಮಾರು 3 ಕಿಲೋಮೀಟರ್ ನಡೆದು ಬ್ಯಾಂಕ್‌ಗೆ ಬಂದರು.
ಬ್ಯಾಂಕ್ ಎದುರು ಅಸ್ಥಿಪಂಜರವನ್ನು ಇಟ್ಟಾಗ, ಅಲ್ಲಿದ್ದ ಸಿಬ್ಬಂದಿ ಮತ್ತು ಸಾರ್ವಜನಿಕರು ಬೆಚ್ಚಿಬಿದ್ದರು. ಈ ಘಟನೆಗೆ ಸಾಕ್ಷಿಯಾದ ಗ್ರಾಮಸ್ಥರು ಬ್ಯಾಂಕ್‌ನ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಜಿತು ಮುಂಡಾ ಅವರನ್ನು ಸಮಾಧಾನಪಡಿಸಿದರು. ದಾಖಲೆಗಳ ವಿಷಯದಲ್ಲಿ ಮಾನವೀಯತೆ ಪ್ರದರ್ಶಿಸಬಹುದಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಸ್ಥಳೀಯ ಸರಪಂಚರ ಮೂಲಕ ಪರಿಶೀಲನೆ ನಡೆಸಬಹುದಿತ್ತು ಎನ್ನಲಾಗಿದೆ.
ಈ ಪ್ರಕರಣವನ್ನು ಪೊಲೀಸರು ಮಾನವೀಯ ನೆಲೆಯಲ್ಲಿ ಪರಿಗಣಿಸುವುದಾಗಿ ತಿಳಿಸಿದ್ದು, ಬ್ಯಾಂಕ್‌ನಿಂದ ಸ್ಪಷ್ಟನೆ ಕೇಳಲಾಗಿದೆ. ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

m

Related Posts