ದೊಡ್ಡಬಳ್ಳಾಪುರ, ಮೇ 06: ತಾಲೂಕಿನ ಕೆ.ಜಿ. ಕುಂಟನಹಳ್ಳಿ ಸಮೀಪದ ನಿರ್ಜನ ಪ್ರದೇಶದಲ್ಲಿ ಕಾರೊಂದು ಬೆಂಕಿಗಾಹುತಿಯಾಗಿದ್ದು, ಅದರೊಳಗೆ ಮಹಿಳೆಯ ಸುಟ್ಟು ಕರಕಲಾದ ಶವ ಪತ್ತೆಯಾದ ಘಟನೆ ಸಂಚಲನ ಮೂಡಿಸಿದೆ. ಪ್ರಕರಣದ ತನಿಖೆ ನಡೆಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಕೆಲವೇ ಗಂಟೆಗಳಲ್ಲಿ ಘಟನೆಯ ಹಿನ್ನಲೆಯನ್ನು ಬಹಿರಂಗಪಡಿಸಿದ್ದಾರೆ.
ಮೃತ ಮಹಿಳೆಯನ್ನು ದೇವನಹಳ್ಳಿಯ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದ ಸರೋಜಾ ಎಂದು ಗುರುತಿಸಲಾಗಿದೆ. ಅವರಿಗೆ ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ. ಪತಿ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೇ 2ರಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದ ಸರೋಜಾ, ಮಧ್ಯದಲ್ಲಿ ಪ್ರಿಯಕರ ರಾಮಾಂಜಿನಪ್ಪನನ್ನು ಭೇಟಿಯಾಗಿದ್ದಾಳೆ. ನಂತರ ಇಬ್ಬರೂ ಕಾರಿನಲ್ಲಿ ದೊಡ್ಡಬಳ್ಳಾಪುರ ಭಾಗದತ್ತ ತೆರಳಿದ್ದಾರೆ.
ರಾಮಾಂಜಿನಪ್ಪ ಯಲಹಂಕ ತಾಲೂಕಿನ ಮಾರಸಂದ್ರ ಗ್ರಾಮದ ನಿವಾಸಿಯಾಗಿದ್ದು, ವೈವಾಹಿಕ ಕಲಹದ ಹಿನ್ನೆಲೆ ಪತ್ನಿಯಿಂದ ದೂರವಿದ್ದ ಎಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಸರೋಜಾಳೊಂದಿಗೆ ಆತನಿಗೆ ಆತ್ಮೀಯತೆ ಬೆಳೆದಿತ್ತು ಎನ್ನಲಾಗಿದೆ.
ಇಬ್ಬರೂ ಕೆ.ಜಿ. ಕುಂಟನಹಳ್ಳಿ ಸಮೀಪದ ನಿರ್ಜನ ಪ್ರದೇಶದಲ್ಲಿ ತಂಗಿದ್ದ ವೇಳೆ ಯಾವುದೋ ವಿಚಾರಕ್ಕೆ ಜಗಳ ಉಂಟಾಗಿದೆ. ಕೋಪಗೊಂಡ ರಾಮಾಂಜಿನಪ್ಪ ಮಾರಕಾಸ್ತ್ರದಿಂದ ಸರೋಜಾಳನ್ನು ಹತ್ಯೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಾರಿನೊಳಗೆ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿ ಹಚ್ಚುವ ವೇಳೆ ಆತನ ಬಟ್ಟೆಗೂ ಬೆಂಕಿ ತಗುಲಿದ್ದು, ಘಟನಾ ಸ್ಥಳದ ಸಮೀಪ ಸುಟ್ಟ ಬಟ್ಟೆ ಮತ್ತು ಮೊಬೈಲ್ ಪತ್ತೆಯಾಗಿದೆ. ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯಲ್ಲಿ ಬಳಸಿದ್ದ ಕಾರು ಸುರೇಶ್ ಎಂಬುವರಿಗೆ ಸೇರಿದ್ದು, ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಬೇಕೆಂದು ಹೇಳಿ ರಾಮಾಂಜಿನಪ್ಪ ಕಾರನ್ನು ಪಡೆದುಕೊಂಡಿದ್ದ ಎಂದು ತಿಳಿದುಬಂದಿದೆ. ಕಾರಿಗೆ ಬೆಂಕಿ ತಗುಲಿದ ಮಾಹಿತಿ ಮಾಲೀಕರ ಮೊಬೈಲ್‌ಗೆ ಸಂದೇಶ ರೂಪದಲ್ಲಿ ಬಂದಿದ್ದು, ಸ್ಥಳಕ್ಕೆ ತೆರಳಿ ನೋಡಿದಾಗ ಕಾರಿನೊಳಗೆ ಮಹಿಳೆಯ ಶವ ಪತ್ತೆಯಾಗಿದೆ. ಈ ಸಂಬಂಧ ಕಾರಿನ ದುರುಪಯೋಗ ಕುರಿತು ದೂರು ದಾಖಲಿಸಲಾಗಿತ್ತು.
ಇದೇ ವೇಳೆ ಆರೋಪಿಯನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಪೊಲೀಸರ ಬೆನ್ನಟ್ಟುವಿಕೆ ತಿಳಿದ ರಾಮಾಂಜಿನಪ್ಪ, ಮಧ್ಯರಾತ್ರಿ ಬಿಡದಿ ಸಮೀಪ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಸ್ಥಳದಲ್ಲಿ ಆತನ ಗುರುತಿನ ಚೀಟಿ ಪತ್ತೆಯಾಗಿದ್ದು, ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣವನ್ನು ತ್ವರಿತವಾಗಿ ಭೇದಿಸಿದ ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪ್ರಶಂಸಿಸಿದ್ದಾರೆ.




m
