ಸುಳ್ಯ, ಮೇ 14: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯ ಸಾಮರ್ಥ್ಯ ಉಪಯೋಜನೆಯ ಪಾಲನಾ ಉಪಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಳ್ಯ ತಾಲೂಕಿನ ಗಾಂಧಿನಗರ, ಜಟ್ಟಿಪಳ್ಳ ಹಾಗೂ ಸುಬ್ರಹ್ಮಣ್ಯ ಅಂಗನವಾಡಿ ಕಂ-ಕ್ರಷ್ ಕೇಂದ್ರಗಳಿಗೆ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಂ-ಕ್ರಷ್ ಕಾರ್ಯಕರ್ತೆ ಹುದ್ದೆಗೆ ಮಾಸಿಕ ಗೌರವಧನ ರೂ. 5,500 ಹಾಗೂ ಸಹಾಯಕಿ ಹುದ್ದೆಗೆ ರೂ. 3,000 ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 30.05.2026ರವರೆಗೆ ವಿಸ್ತರಿಸಲಾಗಿದೆ.
ಅದೇ ಅಂಗನವಾಡಿ ಸರ್ವೆ ವ್ಯಾಪ್ತಿಯ 18 ರಿಂದ 35 ವರ್ಷದೊಳಗಿನ ಮಹಿಳಾ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕಾರ್ಯಕರ್ತೆ ಹುದ್ದೆಗೆ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಈ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವವರನ್ನು ಪರಿಗಣಿಸಲಾಗುವುದು.
ಸಹಾಯಕಿ ಹುದ್ದೆಗೆ ಅಭ್ಯರ್ಥಿಗಳು 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಈ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, 7ನೇ ತರಗತಿ ತೇರ್ಗಡೆಯಾದವರನ್ನು ಪರಿಗಣಿಸಲಾಗುವುದು. ಹೆಚ್ಚಿನ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಸುಳ್ಯನ್ನು ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ. ಸಂಪರ್ಕ ಸಂಖ್ಯೆ: 08257-298139 ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





m
