ನವದೆಹಲಿ / ಪುಣೆ : ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮಹತ್ವದ ಕ್ರಮ ಕೈಗೊಂಡಿದ್ದು, ಪುಣೆ ಮೂಲದ ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ. ಕುಲಕರ್ಣಿ ಅವರನ್ನು ಬಂಧಿಸಿದೆ. ಪ್ರಕರಣದ ಪ್ರಮುಖ ಸಂಚುಕೋರರಲ್ಲಿ ಒಬ್ಬರಾಗಿರುವ ಆರೋಪದ ಮೇಲೆ ಅವರನ್ನು ವಶಕ್ಕೆ ಪಡೆಯಲಾಗಿದೆ.
ಸಿಬಿಐ ತನಿಖೆಯ ಪ್ರಕಾರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಪರವಾಗಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಕುಲಕರ್ಣಿಗೆ ಪ್ರಶ್ನೆ ಪತ್ರಿಕೆಗಳಿಗೆ ಪ್ರವೇಶ ದೊರಕಿತ್ತು ಎಂದು ತಿಳಿದುಬಂದಿದೆ. ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡು ಅವರು ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದೆ. ಏಪ್ರಿಲ್ 2026ರ ಕೊನೆಯ ವಾರದಲ್ಲಿ ಕುಲಕರ್ಣಿ, ಮೇ 14ರಂದು ಬಂಧಿತಳಾದ ಬ್ಯೂಟಿ ಸಲೂನ್ ಮಾಲಕಿ ಮನೀಶಾ ವಾಘ್ಮೋರೆ ಸೇರಿದಂತೆ ಇತರರ ಸಹಕಾರದೊಂದಿಗೆ ಕೆಲ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ್ದಾನೆ ಎಂದು ಸಿಬಿಐ ತಿಳಿಸಿದೆ.
ತನಿಖಾ ಸಂಸ್ಥೆಯ ಪ್ರಕಾರ, ಪುಣೆಯಲ್ಲಿರುವ ತನ್ನ ನಿವಾಸದಲ್ಲೇ ಕುಲಕರ್ಣಿ ವಿಶೇಷ ತರಬೇತಿ ತರಗತಿಗಳನ್ನು ನಡೆಸುತ್ತಿದ್ದ. ಈ ವೇಳೆ ಪ್ರಶ್ನೆಗಳು, ಉತ್ತರ ಆಯ್ಕೆಗಳು ಹಾಗೂ ಸರಿಯಾದ ಉತ್ತರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಅವುಗಳನ್ನು ನೋಟ್ಬುಕ್ಗಳಲ್ಲಿ ಬರೆಯುವಂತೆ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಇನ್ನೂ ಆತಂಕಕಾರಿ ಸಂಗತಿಯೆಂದರೆ, ಆ ತರಗತಿಗಳಲ್ಲಿ ನೀಡಲಾಗಿದ್ದ ಪ್ರಶ್ನೆಗಳು ಮೇ 3ರಂದು ನಡೆದ ನೈಜ ನೀಟ್-ಯುಜಿ 2026 ಪರೀಕ್ಷೆಯ ಪ್ರಶ್ನೆಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗಿವೆ ಎಂದು ಸಿಬಿಐ ಹೇಳಿದೆ. ಇದರಿಂದ ದೇಶದ ಅತ್ಯಂತ ಮಹತ್ವದ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.
ಪ್ರಕರಣದ ತನಿಖೆಯನ್ನು ಸಿಬಿಐ ಮುಂದುವರಿಸಿದ್ದು, ಇನ್ನಷ್ಟು ಬಂಧನಗಳ ಸಾಧ್ಯತೆ ಇರುವುದಾಗಿ ಮೂಲಗಳು ತಿಳಿಸಿವೆ.






m
