Featured, ಇತರೆ, ಸ್ಥಳೀಯ

ಸುಳ್ಯ : ಗ್ರಾಮೀಣ ಅಭಿವೃದ್ಧಿಗೆ ವೇಗ ‌/ ಸುಳ್ಯ ಕ್ಷೇತ್ರದ ಪ್ರಮುಖ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೆ ಶಾಸಕಿ ಭಾಗೀರಥಿ ಮುರುಳ್ಯ ಮನವಿ

ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಕಾಳಜಿ ವಹಿಸಿರುವ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಇಂದು ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕ್ಷೇತ್ರದ ಹಲವು ಪ್ರಮುಖ ಕಾಮಗಾರಿಗಳ ಕುರಿತು ಚರ್ಚಿಸಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.
ಈ ವೇಳೆ ಕಳೆದ ವರ್ಷ ಮೇ ತಿಂಗಳಲ್ಲಿ ಕಡಬ ತಾಲೂಕಿನ ಕೆನ್ಯ ಗ್ರಾಮದ ಮಜ್ಜಾರು–ಕಡಾವು ಪ್ರದೇಶದಲ್ಲಿ ಕಿರು ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣಕ್ಕೆ ಸಲ್ಲಿಸಿದ್ದ ಮನವಿಯನ್ನು ಮತ್ತೊಮ್ಮೆ ನೆನಪಿಸಿದರು. ಈ ಯೋಜನೆಗೆ ಸಂಬಂಧಿಸಿ ವರಾಹಿ ಹಾಗೂ ಬೃಹತ್ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಯೋಜನಾ ವರದಿಯನ್ನೂ ಸಿದ್ಧಪಡಿಸಿದ್ದರೂ, ನಂತರ ಕಾಮಗಾರಿ ಯಾವುದೇ ರೀತಿಯಲ್ಲಿ ಮುಂದುವರಿಯದೆ ಸ್ಥಗಿತಗೊಂಡಿರುವುದನ್ನು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಅದೇ ರೀತಿ, ಈಗಾಗಲೇ ಅನುದಾನ ಮಂಜೂರಾಗಿರುವ ಆಲೆಟ್ಟಿ ಗ್ರಾಮ ಕುಕ್ಕುಂಬಳ ಸೇತುವೆ ಕಾಮಗಾರಿ ಇನ್ನೂ ಟೆಂಡರ್ ಹಂತದಲ್ಲೇ ಉಳಿದಿರುವುದರಿಂದ, ಅಗತ್ಯ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿದರು.
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸದಾ ಸಕ್ರಿಯರಾಗಿರುವ ಶಾಸಕ ಭಾಗೀರಥಿ ಮುರುಳ್ಯ ಅವರ ಮನವಿಗೆ ಸ್ಪಂದಿಸಿದ ಉಪಮುಖ್ಯಮಂತ್ರಿಗಳು ತಕ್ಷಣವೇ ಕೆಎನ್‌ಎಲ್‌ಎಲ್ ಅಧಿಕಾರಿಗಳಿಗೆ ಅಗತ್ಯ ಕ್ರಮಗಳನ್ನು ವೇಗವಾಗಿ ಪೂರ್ಣಗೊಳಿಸಿ ಕಾಮಗಾರಿಗಳನ್ನು ಆರಂಭಿಸುವಂತೆ ಸೂಚನೆ ನೀಡಿದರು.
ಗ್ರಾಮೀಣ ಭಾಗದ ಜನರ ದೀರ್ಘಕಾಲದ ಬೇಡಿಕೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಶಾಸಕರು ತೋರಿಸುತ್ತಿರುವ ಬದ್ಧತೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
m

Related Posts