ಇತರೆ, ಸ್ಥಳೀಯ

ಬೆಂಗಳೂರು ಟೌನ್ ಹಾಲ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ ಕರ್ನಾಟಕ’ ಸಭೆಗೆ ಅನುಮತಿ ಇಲ್ಲ: ನಗರ ಪೊಲೀಸ್ ಸ್ಪಷ್ಟನೆ

ಬೆಂಗಳೂರು, ಮೇ 22: ಮೇ 24 ರಂದು ಬೆಂಗಳೂರಿನ ಟೌನ್ ಹಾಲ್‌ನಲ್ಲಿ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ ಕರ್ನಾಟಕ’ ಸಭೆಗೆ ಯಾವುದೇ ರೀತಿಯ ಅನುಮತಿ ನೀಡಲಾಗಿಲ್ಲ ಎಂದು ಬೆಂಗಳೂರು ನಗರ ಪೊಲೀಸರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
‘ಕಾಕ್ರೋಚ್ ಜನತಾ ಪಾರ್ಟಿ ಕರ್ನಾಟಕ’ ಎಂಬ ಶೀರ್ಷಿಕೆಯಡಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ “ಶಾಂತಿಯುತ ಮಾನವ ಸರಪಳಿ” ರೂಪಿಸುವಂತೆ ಕರೆ ನೀಡಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ಟೌನ್ ಹಾಲ್ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮ ನಡೆಸಲು ಯಾವುದೇ ವ್ಯಕ್ತಿ, ಸಂಘಟನೆ ಅಥವಾ ರಾಜಕೀಯ ಪಕ್ಷದಿಂದ ಅನುಮತಿ ಕೋರಿ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಕಾರ್ಯಕ್ರಮಕ್ಕಾಗಿ ಟೌನ್ ಹಾಲ್ ಪ್ರದೇಶವನ್ನು ಬಳಸಲು ಸಂಬಂಧಿತ ಜಿಬಿಎ ಕಚೇರಿಯಿಂದಲೂ ಯಾವುದೇ ಅಧಿಕೃತ ಅನುಮತಿ ಪಡೆಯಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಗಸ್ಟ್ 1, 2022 ರಂದು ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದ ಪ್ರಕಾರ, ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಪ್ರತಿಭಟನೆ, ಧರಣಿ ಹಾಗೂ ರ್ಯಾಲಿಗಳಿಗೆ ಅವಕಾಶವಿಲ್ಲ. ಆದ್ದರಿಂದ ಟೌನ್ ಹಾಲ್ ಮುಂದೆ ಜನರು ಜಮಾಯಿಸುವುದು ನ್ಯಾಯಾಲಯದ ನಿರ್ದೇಶನಗಳ ಉಲ್ಲಂಘನೆಯಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟರ್ ಮೂಲಕ ಹರಡುತ್ತಿರುವ ಇಂತಹ ಸಂದೇಶಗಳನ್ನು ಸಾರ್ವಜನಿಕರು ತಿಳಿದೋ ತಿಳಿಯದೆಯೋ ಹಂಚಿಕೊಳ್ಳಬಾರದು ಹಾಗೂ ಟೌನ್ ಹಾಲ್ ಬಳಿ ಸೇರಬಾರದು ಎಂದು ಮನವಿ ಮಾಡಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸಾರ್ವಜನಿಕ ಹಿತಾಸಕ್ತಿಯಲ್ಲಿ ಈ ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
m

Related Posts