ವೈದ್ಯಕೀಯ ತಂಡದಿಂದ ಮರಣದ ಸುದ್ದಿ ದೃಢೀಕರಣವಾಗಿಲ್ಲ
ಸುಳ್ಯ: ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಸುಳ್ಯದ ಖ್ಯಾತ ತೆರಿಗೆ ಸಲಹೆಗಾರ ಸುಬ್ರಮಣ್ಯ ಅವರು ಇನ್ನೂ ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಅಪಘಾತದಲ್ಲಿ ಅವರ ತಲೆಯ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಪ್ರಸ್ತುತ ಅವರು ಕೋಮಾ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ. ಪರಿಣತ ವೈದ್ಯಕೀಯ ತಂಡದ ನಿಗಾದಲ್ಲಿಯೇ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ವದಂತಿಗಳ ನಡುವೆಯೂ, ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ತಂಡವು ಅವರ ಮರಣದ ಸುದ್ದಿಯನ್ನು ದೃಢೀಕರಿಸಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಸುಬ್ರಮಣ್ಯ ಅವರ ಆರೋಗ್ಯದಲ್ಲಿ ಶೀಘ್ರ ಚೇತರಿಕೆ ಕಂಡುಬರಲೆಂದು ಕುಟುಂಬಸ್ಥರು, ಸ್ನೇಹಿತರು ಹಾಗೂ ಹಿತೈಷಿಗಳು ಪ್ರಾರ್ಥಿಸುತ್ತಿದ್ದಾರೆ.





m
