ನ್ಯೂಯಾರ್ಕ್, ಜೂನ್ 17: ವಿಶ್ವದ ಪ್ರಮುಖ ಪಿಜ್ಜಾ ಸರಣಿಗಳಲ್ಲೊಂದಾದ ಪಿಜ್ಜಾ ಹಟ್ (Pizza Hut) ತನ್ನ ಮಾಲೀಕತ್ವ ಬದಲಾವಣೆಯತ್ತ ಹೆಜ್ಜೆ ಇಟ್ಟಿದೆ. ಪಿಜ್ಜಾ ಹಟ್‌ನ ಪ್ರಸ್ತುತ ಮಾಲೀಕ ಸಂಸ್ಥೆಯಾದ ಯಮ್ ಬ್ರ್ಯಾಂಡ್ಸ್ (Yum! Brands) ಈ ಬ್ರ್ಯಾಂಡ್ ಅನ್ನು ಒಟ್ಟು 2.7 ಬಿಲಿಯನ್ ಡಾಲರ್ (ಸುಮಾರು ₹22,500 ಕೋಟಿ) ಮೌಲ್ಯದ ಒಪ್ಪಂದದ ಮೂಲಕ ಮಾರಾಟ ಮಾಡಲು ನಿರ್ಧರಿಸಿದೆ.
ಕೆಎಫ್‌ಸಿ (KFC) ಮತ್ತು ಟಾಕೋ ಬೆಲ್ (Taco Bell) ಸೇರಿದಂತೆ ಹಲವು ಜನಪ್ರಿಯ ಆಹಾರ ಬ್ರ್ಯಾಂಡ್‌ಗಳನ್ನು ಹೊಂದಿರುವ ಯಮ್ ಬ್ರ್ಯಾಂಡ್ಸ್, ಇನ್ಮುಂದೆ ಹೆಚ್ಚು ಲಾಭದಾಯಕ ವ್ಯವಹಾರಗಳ ಮೇಲೆ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ.
ಮಾರಾಟ ಒಪ್ಪಂದದ ಪ್ರಕಾರ, ಚೀನಾವನ್ನು ಹೊರತುಪಡಿಸಿ ಅಮೆರಿಕ, ಭಾರತ ಸೇರಿದಂತೆ ಜಗತ್ತಿನ ಇತರೆಲ್ಲಾ ದೇಶಗಳ ಪಿಜ್ಜಾ ಹಟ್ ವ್ಯವಹಾರವನ್ನು ಖಾಸಗಿ ಇಕ್ವಿಟಿ ಸಂಸ್ಥೆಯಾದ ಲಾಂಗ್ರೇಂಜ್ ಕ್ಯಾಪಿಟಲ್ (LongRange Capital) ಸುಮಾರು 1.5 ಬಿಲಿಯನ್ ಡಾಲರ್‌ಗೆ ಖರೀದಿಸಲಿದೆ.
ಇನ್ನು ಚೀನಾದಲ್ಲಿನ ಪಿಜ್ಜಾ ಹಟ್ ವ್ಯವಹಾರವನ್ನು ಯಮ್ ಚೀನಾ ಹೋಲ್ಡಿಂಗ್ಸ್ (Yum China Holdings) ಸಂಸ್ಥೆ 1.2 ಬಿಲಿಯನ್ ಡಾಲರ್ ನೀಡಿ ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳಲಿದೆ.
68 ವರ್ಷಗಳ ಇತಿಹಾಸ ಹೊಂದಿರುವ ಪಿಜ್ಜಾ ಹಟ್ ಇತ್ತೀಚಿನ ವರ್ಷಗಳಲ್ಲಿ ತೀವ್ರ ಪೈಪೋಟಿಯನ್ನು ಎದುರಿಸುತ್ತಿತ್ತು. ಆನ್‌ಲೈನ್ ಆಹಾರ ವಿತರಣಾ ಸೇವೆಗಳಾದ ಉಬರ್ ಈಟ್ಸ್ (Uber Eats) ಮತ್ತು ಡೋರ್‌ಡ್ಯಾಶ್ (DoorDash) ವಿಸ್ತರಣೆ, ಜೊತೆಗೆ ಡೊಮಿನೋಸ್ (Domino’s) ಸೇರಿದಂತೆ ಸ್ಪರ್ಧಾತ್ಮಕ ಸಂಸ್ಥೆಗಳ ಒತ್ತಡದಿಂದ ಪಿಜ್ಜಾ ಹಟ್ ತನ್ನ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುತ್ತಾ ಬಂದಿದೆ.
ಕಳೆದ 10 ತ್ರೈಮಾಸಿಕಗಳಿಂದ ಮಾರಾಟದಲ್ಲಿ ಕುಸಿತ ದಾಖಲಾಗಿದ್ದ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ನಷ್ಟದಲ್ಲಿದ್ದ ಸುಮಾರು 250 ಔಟ್‌ಲೆಟ್‌ಗಳನ್ನು ಇತ್ತೀಚೆಗೆ ಮುಚ್ಚಲಾಗಿತ್ತು.
ಆದರೆ ಭಾರತದ ಗ್ರಾಹಕರಿಗೆ ಈ ಮಾಲೀಕತ್ವ ಬದಲಾವಣೆಯಿಂದ ಯಾವುದೇ ತಕ್ಷಣದ ಪರಿಣಾಮ ಉಂಟಾಗುವುದಿಲ್ಲ. ಭಾರತದಲ್ಲಿ ಪಿಜ್ಜಾ ಹಟ್‌ನ ಫ್ರಾಂಚೈಸಿ ಹಕ್ಕು ಹೊಂದಿರುವ ದೇವಯಾನಿ ಇಂಟರ್ನ್ಯಾಷನಲ್ (Devyani International) ಸಂಸ್ಥೆಯೇ ಎಂದಿನಂತೆ ರೆಸ್ಟೋರೆಂಟ್‌ಗಳ ಕಾರ್ಯಾಚರಣೆಯನ್ನು ಮುಂದುವರಿಸಲಿದೆ. ವ್ಯತ್ಯಾಸವೆಂದರೆ, ಇನ್ಮುಂದೆ ಸಂಸ್ಥೆಯು ಹೊಸ ಮಾಲೀಕರಾದ ಲಾಂಗ್ರೇಂಜ್ ಕ್ಯಾಪಿಟಲ್‌ಗೆ ವರದಿ ಸಲ್ಲಿಸಬೇಕಾಗುತ್ತದೆ.
ಈ ಜಾಗತಿಕ ಸ್ವಾಧೀನ ಪ್ರಕ್ರಿಯೆಯು 2026ರ ಮೂರನೇ ತ್ರೈಮಾಸಿಕದೊಳಗೆ, ಅಂದರೆ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.





m
