ಸುಳ್ಯ: ಮಲೆನಾಡು ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಜನತಾ ಸಮೂಹ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಗರದ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ಅಬ್ದುಲ್ ಮಜೀದ್ ಜನತ ಅವರ ನಿವಾಸದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಬೆಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಪದವಿ ಪಡೆದ ಸುಳ್ಯದ ಜಯನಗರ ನಿವಾಸಿಗಳಾದ ಅಬ್ದುಲ್ ಹಮೀದ್ ಮಮತ ಎಸ್.ಎ. ಹಾಗೂ ಮಮ್ತಾಜ್ ದಂಪತಿಗಳ ಪುತ್ರ ಡಾ. ಅಬ್ದುಲ್ ಶಾರೂಕ್, 2025–26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪೈಚಾರು ನಿವಾಸಿಗಳಾದ ಆಬಿದ್ ಹಾಗೂ ಸಾಜಿದಾ ದಂಪತಿಗಳ ಪುತ್ರಿ ಫಾತಿಮತ್ ಶಹ್ಲಾ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ 2025–26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಅತ್ಯಧಿಕ ಅಂಕಗಳೊಂದಿಗೆ ತೇರ್ಗಡೆಯಾದ ನಾವೂರು ನಿವಾಸಿಗಳಾದ ಅಬೂಬಕ್ಕರ್ ಕಲ್ಲಪ್ಪಳ್ಳಿ ಹಾಗೂ ಆಯಿಶಾ ದಂಪತಿಗಳ ಪುತ್ರಿ ಆಸಿಯಾ, ಹಾಗೂ ಅನ್ಸಾರಿಯ ಎಜುಕೇಶನ್ ಸೆಂಟರ್ ವಿದ್ಯಾರ್ಥಿಯಾಗಿ ಹಾಫಿಲ್ ಪದವಿ ಪಡೆದು ದುಬೈ ನಾಲೆಡ್ಜ್ ಪಾರ್ಕ್‌ನಲ್ಲಿ ಬಿಸಿನೆಸ್ ಕೋರ್ಸ್‌ಗೆ ಆಯ್ಕೆಯಾಗಿರುವ ಅಬ್ದುಲ್ ರಝಾಕ್ ಸಂಗಂ ಅವರ ಪುತ್ರ ಹಾಫಿಲ್ ಮಹಮ್ಮದ್ ಶಾಝ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಶುಭ ಹಾರೈಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ. ಶಹೀದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫ ಜನತ, ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತ, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಜನತ, ಅನಿವಾಸಿ ಉದ್ಯಮಿ ನಿಝಾರ್ ಬಾರ್ಪಣೆ, ಪಟೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸೈಫುದ್ದೀನ್ ಪಟೇಲ್, ಡಾ. ರಿಜ್ವಾನ್ ಮತ್ತಿತರರು ಉಪಸ್ಥಿತರಿದ್ದರು.
ಅತಿಥಿಗಳು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ, ಪೋಷಕರನ್ನು ಅಭಿನಂದಿಸಿದರು. ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಝ್ ಕಟ್ಟೆಕ್ಕಾರ್ ಅವರ ಇಂತಹ ಪ್ರೋತ್ಸಾಹದಾಯಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಇನ್ನಷ್ಟು ಸ್ಪೂರ್ತಿ ನೀಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಹಾಜಿ ಉಮ್ಮರ್ ಕಟ್ಟೆಕ್ಕಾರ್, ಎಸ್.ಎಂ. ಅಬ್ದುಲ್ ಹಮೀದ್, ಸಿದ್ದೀಕ್ ಕೊಕೊ, ಮನ್ಸೂರ್ ಮೆಟ್ರೊ, ಬಶೀರ್ ಸಪ್ನಾ, ರಿಜ್ವಾನ್ ಜನತ, ರಿಫಾಯಿ ಜನತ ಸೇರಿದಂತೆ ಪೋಷಕರಾದ ಆಬಿದ್ ಪೈಚಾರ್, ಅಬೂಬಕ್ಕರ್ ಕಲ್ಲಪ್ಪಳ್ಳಿ, ರಝಾಕ್ ಸಂಗಂ, ಉಬೈದುಲ್ಲಾ ಕಟ್ಟೆಕ್ಕಾರ್, ನಾಸಿರ್ ಕಟ್ಟೆಕ್ಕಾರ್, ಶಿಹಾಬ್ ಕೇರ್ಪಳ, ಅಬ್ದುಲ್ ಖಾದರ್ ಹಾಗೂ ಹಲವರು ಭಾಗವಹಿಸಿದ್ದರು.
ಕಾರ್ಯಕ್ರಮವು ಹಾಫಿಲ್ ಮಹಮ್ಮದ್ ಶಾಝ್ ಅವರ ಪವಿತ್ರ ಕುರ್‌ಆನ್ ಕಿರಾಅತ್‌ನೊಂದಿಗೆ ಆರಂಭವಾಯಿತು. ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಝ್ ಕಟ್ಟೆಕ್ಕಾರ್ ಸ್ವಾಗತಿಸಿದರು. ಕೆ.ಬಿ. ಇಬ್ರಾಹಿಂ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು. ಬಳಿಕ ಅಬ್ದುಲ್ ಮಜೀದ್ ದಂಪತಿಗಳ ವತಿಯಿಂದ ಆಯೋಜಿಸಲಾದ ಚಹಾ ಕೂಟದಲ್ಲಿ ಎಲ್ಲರೂ ಭಾಗವಹಿಸಿದರು.





m
