Featured, ಅಂಕಣ, ಸ್ಥಳೀಯ

“ಕೇಂದ್ರದೊಂದಿಗೆ ಸಂಘರ್ಷವಲ್ಲ, ಅಭಿವೃದ್ಧಿಯೇ ಆದ್ಯತೆ” — ತಮಿಳುನಾಡು ಸಿಎಂ ವಿಜಯ್ ಸ್ಪಷ್ಟನೆ

ಚೆನ್ನೈ: ಕೇಂದ್ರ ಸರ್ಕಾರದ ನೀತಿಗಳಿಗೆ ತತ್ವದ ಮಟ್ಟದಲ್ಲಿ ವಿರೋಧ ಇದ್ದರೂ, ಅಂಧವಾಗಿ ಘರ್ಷಣೆಗೆ ಹೋಗುವುದಿಲ್ಲ; ರಾಜ್ಯದ ಅಭಿವೃದ್ಧಿಯೇ ನಮ್ಮ ಪ್ರಮುಖ ಗುರಿ ಎಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, “ನಾನು ಶೂಟಿಂಗ್‌ನಿಂದ ನೇರವಾಗಿ ಬಂದು ಮುಖ್ಯಮಂತ್ರಿಯಾದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಆದರೆ 1990ರ ದಶಕದಿಂದಲೇ ಜನಪರ ಕಾರ್ಯಗಳಲ್ಲಿ ತೊಡಗಿದ್ದೇನೆ. ನನ್ನ ಚಿತ್ರಗಳ ಮೂಲಕ ಭ್ರಷ್ಟಾಚಾರ ವಿರೋಧ, ಸಾಮಾಜಿಕ ನ್ಯಾಯ ಮತ್ತು ಶಿಕ್ಷಣದ ಮಹತ್ವವನ್ನು ಎತ್ತಿಹಿಡಿದಿದ್ದೇನೆ. ಜನರು ನಮ್ಮ ನಿಲುವನ್ನು ಅರ್ಥಮಾಡಿಕೊಂಡದ್ದರಿಂದಲೇ ಇಂದು ಅಧಿಕಾರಕ್ಕೆ ತಂದಿದ್ದಾರೆ,” ಎಂದರು.

ಅಧಿಕಾರಕ್ಕೆ ಬಂದ 40 ದಿನಗಳಲ್ಲಿ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದ ಅವರು, ಲಯನ್ಸ್ ಟಾಸ್ಕ್ ಫೋರ್ಸ್ ರಚನೆ, 200 ಯೂನಿಟ್ ಉಚಿತ ವಿದ್ಯುತ್, ಕುರುವೈ ಬೆಳೆ ಪ್ಯಾಕೇಜ್, ಮಾದಕ ದ್ರವ್ಯ ನಿರ್ಮೂಲನೆ ಪಡೆ, 717 ಮದ್ಯದಂಗಡಿಗಳ ಮುಚ್ಚುವಿಕೆ, ಅಮ್ಮ ಕ್ಯಾಂಟೀನ್‌ಗಳ ನವೀಕರಣ, ಡೀಡ್ ನೋಂದಣಿ ಇಲಾಖೆಯಲ್ಲಿ ಅಕ್ರಮಗಳಿಗೆ ಕಡಿವಾಣ ಮತ್ತು ಬೆಳೆ ಸಾಲ ಮನ್ನಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ರಾಜ್ಯದ ಆರ್ಥಿಕ ಸ್ಥಿತಿ ಹಿನ್ನಡೆಯಲ್ಲಿದೆ ಎಂದು ಒಪ್ಪಿಕೊಂಡ ವಿಜಯ್, “ಖಜಾನೆ ಖಾಲಿಯಾದ ಪರಿಸ್ಥಿತಿಯಲ್ಲಿ ಆಡಳಿತ ನಡೆಸಲು ನಾವು ಅಸಮರ್ಥರು ಎಂದು ಕೆಲವರು ಹೇಳುತ್ತಾರೆ. ಆದರೆ ನಮಗೆ ಸಾರ್ವಜನಿಕ ಸೇವೆ ಮಾಡುವುದು ಗೊತ್ತೇ ಹೊರತು, ಹಣ ದುರುಪಯೋಗ ಮಾಡುವುದಿಲ್ಲ,” ಎಂದು ಪ್ರತಿಕ್ರಿಯಿಸಿದರು. ವಿದ್ಯುತ್ ವ್ಯತ್ಯಯಕ್ಕೆ ಹಿಂದಿನ ಆಡಳಿತದ ಅಕ್ರಮಗಳು ಹಾಗೂ ನಿರ್ವಹಣಾ ದೋಷಗಳೇ ಕಾರಣ ಎಂದು ಅವರು ದೂರಿದರು.

ಕೇಂದ್ರದೊಂದಿಗೆ ಸಂಬಂಧದ ಬಗ್ಗೆ ಮಾತನಾಡಿದ ಅವರು, “ನಾವು ಒಕ್ಕೂಟ ತತ್ವ ಮತ್ತು ರಾಜ್ಯಗಳ ಸ್ವಾಯತ್ತತೆಯನ್ನು ನಂಬುತ್ತೇವೆ. ತತ್ವದ ವಿಚಾರದಲ್ಲಿ ವಿರೋಧ ಇದ್ದರೂ, ಅಂಧ ಸಂಘರ್ಷಕ್ಕೆ ನಾವು ಹೋಗುವುದಿಲ್ಲ. ತಮಿಳುನಾಡಿನ ಅಭಿವೃದ್ಧಿಯೇ ನಮ್ಮ ಆದ್ಯತೆ,” ಎಂದರು.

“ರಾಜಕೀಯ ತತ್ವಗಳು ಮತ್ತು ರಾಜ್ಯದ ಹಕ್ಕುಗಳ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ನಾವು ಯಾರ ‘ಬಿ’ ತಂಡವೂ ಅಲ್ಲ, ಜನರ ಪರವಾದ ಸ್ವತಂತ್ರ ತಂಡ. ನೀಟ್ ಪರೀಕ್ಷೆ ರದ್ದುಪಡಿಸಲು ನಾವು ಬದ್ಧರಾಗಿದ್ದೇವೆ,” ಎಂದು ಸ್ಪಷ್ಟಪಡಿಸಿದರು.

ಕಾನೂನು-ಸುವ್ಯವಸ್ಥೆ ವಿಚಾರದಲ್ಲಿ ವಿರೋಧ ಪಕ್ಷಗಳು ಮಾಡುತ್ತಿರುವ ಟೀಕೆಗಳನ್ನು ತಳ್ಳಿ ಹಾಕಿದ ಅವರು, “ಇದು ಮಾನನಷ್ಟ ರಾಜಕೀಯ ಮಾತ್ರ,” ಎಂದು ಆರೋಪಿಸಿದರು.

m

Related Posts