ಇತರೆ, ಸ್ಥಳೀಯ

ಬೆಂಗಳೂರು: ಅನಾರೋಗ್ಯದ ನೋವಿಗೆ ಬಲಿಯಾದ ದಾಂಪತ್ಯ; ಪತ್ನಿಯನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ 85 ವರ್ಷದ ವೃದ್ಧ

ಈ ಹೃದಯವಿದ್ರಾವಕ ಘಟನೆ ವಯೋಸಹಜ ಅನಾರೋಗ್ಯ, ಏಕಾಂತ ಮತ್ತು ಮಾನಸಿಕ ಒತ್ತಡಗಳು ಹಿರಿಯರ ಬದುಕಿನ ಮೇಲೆ ಎಷ್ಟು ಆಳವಾದ ಪರಿಣಾಮ ಬೀರುತ್ತವೆ ಎಂಬುದನ್ನು ಮತ್ತೊಮ್ಮೆ ಮನಗಾಣಿಸಿದೆ….

ಬೆಂಗಳೂರು: ಬದುಕಿನ ಸಂಧ್ಯಾಕಾಲದಲ್ಲಿ ಅನಾರೋಗ್ಯದ ಸಂಕಷ್ಟ ಮತ್ತು ಜೀವನದ ಅಸಹಾಯಕತೆ ದಾರುಣ ಅಂತ್ಯ ಕಂಡ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 85 ವರ್ಷದ ವೃದ್ಧರೊಬ್ಬರು ತಮ್ಮ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆಗೈದು, ಬಳಿಕ ತಾವೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ಬಿಹಾರ ಮೂಲದ ನಂದನ್‌ ಪ್ರಸಾದ್‌ (85) ಹಾಗೂ ಅವರ ಪತ್ನಿ ಸುಮಿತ್ರಾ ದೇವಿ (77) ಎಂದು ಗುರುತಿಸಲಾಗಿದೆ.
ಚೊಕ್ಕನಾಯಕನಹಳ್ಳಿಯ ರಾಚೇನಹಳ್ಳಿ ಕೆರೆ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಪುತ್ರ ಕಿರಣ್‌ಕುಮಾರ್ ಅವರ ಕುಟುಂಬದೊಂದಿಗೆ ವಾಸವಾಗಿದ್ದ ಈ ವೃದ್ಧ ದಂಪತಿ, ಸೋಮವಾರ ತಡರಾತ್ರಿ ತಮ್ಮ ಕೊಠಡಿಯಲ್ಲಿ ಮಲಗಲು ತೆರಳಿದ್ದರು. ಇದೇ ವೇಳೆ ನಂದನ್‌ ಪ್ರಸಾದ್‌ ಅವರು ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದು, ಬಳಿಕ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಂದನ್‌ ಪ್ರಸಾದ್‌ ಹಾಗೂ ವಯೋಸಹಜ ಅಂಧತ್ವ ಮತ್ತು ಕಿವುಡುತನದಿಂದ ನರಳುತ್ತಿದ್ದ ಸುಮಿತ್ರಾ ದೇವಿ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು. ಮಕ್ಕಳಿಗೆ ಹೊರೆಯಾಗಬಾರದು ಎಂಬ ಮನಸ್ಥಿತಿಯಿಂದ ಈ ಕೃತ್ಯ ಎಸಗಿರುವ ಸಾಧ್ಯತೆಯನ್ನು ಪೊಲೀಸರು ಶಂಕಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಎಂದಿನಂತೆ ಉಪಾಹಾರ ಸಿದ್ಧಪಡಿಸಿದ್ದ ಪುತ್ರ ಕಿರಣ್‌ಕುಮಾರ್‌, ಪೋಷಕರನ್ನು ಕರೆಯಲು ಕೊಠಡಿ ಬಾಗಿಲು ತಟ್ಟಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ ಆತಂಕಗೊಂಡು ಬಾಗಿಲು ಒಡೆದು ನೋಡಿದ ವೇಳೆ, ತಂದೆ ನೇಣು ಬಿಗಿದ ಸ್ಥಿತಿಯಲ್ಲಿ ಮತ್ತು ತಾಯಿ ಹಾಸಿಗೆಯಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ. ಈ ದೃಶ್ಯ ಕುಟುಂಬವನ್ನು ತೀವ್ರ ಆಘಾತಕ್ಕೀಡು ಮಾಡಿತು.

ಕಿರಣ್‌ಕುಮಾರ್‌ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ 2025ರಲ್ಲಿ ನಿವೃತ್ತರಾಗಿದ್ದರು. ಬಳಿಕ ಖಾಸಗಿ ಭದ್ರತಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಸ್ವಂತ ಊರಾದ ಬಿಹಾರದಲ್ಲಿದ್ದ ವೃದ್ಧ ಪೋಷಕರನ್ನು ಇತ್ತೀಚೆಗೆ ಬೆಂಗಳೂರಿಗೆ ಕರೆತಂದು ತಮ್ಮ ಜತೆಯೇ ಆರೈಕೆ ಮಾಡುತ್ತಿದ್ದರು. ಘಟನೆ ನಡೆದ ವೇಳೆ ಅವರ ಪತ್ನಿ ಹಾಗೂ ಪುತ್ರ ಸಂಬಂಧಿಕರ ಮದುವೆ ನಿಮಿತ್ತ ಬಿಹಾರಕ್ಕೆ ತೆರಳಿದ್ದು, ಕಿರಣ್‌ಕುಮಾರ್‌, ಪುತ್ರಿ ಮತ್ತು ವೃದ್ಧ ದಂಪತಿ ಮಾತ್ರ ಮನೆಯಲ್ಲಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಂಪಿಗೆಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

m

Related Posts