ಇತರೆ

ಬ್ರಿಕ್ಸ್ ಬಜಾರ್‌ನಲ್ಲಿ ಭಾರತೀಯ ಕರಕುಶಲ ವೈಭವಕ್ಕೆ ಮಾರುಹೋದ ಇರಾನ್ ಅಧ್ಯಕ್ಷರ ಪುತ್ರಿ

ನವದೆಹಲಿ: 18ನೇ ಬ್ರಿಕ್ಸ್ ಶೃಂಗಸಭೆಯ ರಾಜತಾಂತ್ರಿಕ ಹಾಗೂ ಗಂಭೀರ ಚರ್ಚೆಗಳ ನಡುವೆ ನವದೆಹಲಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದು ಗಮನ ಸೆಳೆದಿದೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಪುತ್ರಿ ಜಹ್ರಾ ಪೆಜೆಶ್ಕಿಯಾನ್ ಅವರು ರಾಷ್ಟ್ರೀಯ ಕರಕುಶಲ ವಸ್ತುಸಂಗ್ರಹಾಲಯದಲ್ಲಿ ಆಯೋಜಿಸಲಾಗಿದ್ದ ‘ಬ್ರಿಕ್ಸ್ ಬಜಾರ್’ಗೆ ಭೇಟಿ ನೀಡಿ ಭಾರತೀಯ ಕಲೆ, ಕೈಮಗ್ಗ ಹಾಗೂ ಸಾಂಪ್ರದಾಯಿಕ ಕರಕುಶಲ ವೈಭವವನ್ನು ವೀಕ್ಷಿಸಿದರು.
ಜಹ್ರಾ ಪೆಜೆಶ್ಕಿಯಾನ್ ಅವರು ತಮ್ಮ ಪತಿ ಹಸನ್ ಮಜಿದಿ ಅವರೊಂದಿಗೆ ಬಜಾರ್‌ಗೆ ಆಗಮಿಸಿದ್ದರು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರು ಜಹ್ರಾ ದಂಪತಿಯನ್ನು ಭಾರತೀಯ ಸಾಂಪ್ರದಾಯಿಕ ರೀತಿಯಲ್ಲಿ ಆತ್ಮೀಯವಾಗಿ ಸ್ವಾಗತಿಸಿ, ವಸ್ತುಸಂಗ್ರಹಾಲಯದ ವಿವಿಧ ವಿಭಾಗಗಳಿಗೆ ಕರೆದೊಯ್ದರು.
ಬ್ರಿಕ್ಸ್ ಬಜಾರ್‌ನ ವಿವಿಧ ಮಳಿಗೆಗಳಿಗೆ ಭೇಟಿ ನೀಡಿದ ಜಹ್ರಾ ಅವರು ಭಾರತೀಯ ಕೈಮಗ್ಗ ಉಡುಪುಗಳು, ಸಾಂಪ್ರದಾಯಿಕ ಜವಳಿ, ಕುಂಬಾರಿಕೆ ಸೇರಿದಂತೆ ವಿವಿಧ ಕರಕುಶಲ ಉತ್ಪನ್ನಗಳನ್ನು ಆಸಕ್ತಿಯಿಂದ ವೀಕ್ಷಿಸಿದರು. ಸ್ಥಳೀಯ ಕುಶಲಕರ್ಮಿಗಳೊಂದಿಗೆ ಸಂವಾದ ನಡೆಸಿದ ಅವರು, ಕಚ್ಚಾ ವಸ್ತುಗಳಿಂದ ಸುಂದರ ಕಲಾಕೃತಿಗಳನ್ನು ಕೈಯಾರೆ ರೂಪಿಸುವ ವಿಧಾನ ಹಾಗೂ ಅದರ ಹಿಂದಿನ ಪರಿಶ್ರಮದ ಕುರಿತು ಮಾಹಿತಿ ಪಡೆದುಕೊಂಡರು.ಭಾರತೀಯ ಕುಶಲಕರ್ಮಿಗಳ ಕೌಶಲ, ಸೃಜನಶೀಲತೆ ಮತ್ತು ಪರಿಶ್ರಮವನ್ನು ಜಹ್ರಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಬಜಾರ್‌ನಲ್ಲಿ ಶಾಪಿಂಗ್ ಮಾಡುವ ಮೂಲಕ ವಿವಿಧ ಭಾರತೀಯ ಕರಕುಶಲ ಉತ್ಪನ್ನಗಳ ಬಗ್ಗೆ ತಮ್ಮ ಆಸಕ್ತಿಯನ್ನೂ ವ್ಯಕ್ತಪಡಿಸಿದರು.
ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಆಯೋಜಿಸಲಾದ ‘ಬ್ರಿಕ್ಸ್ ಬಜಾರ್’ನಲ್ಲಿ ಸದಸ್ಯ ರಾಷ್ಟ್ರಗಳ ಸಾಂಪ್ರದಾಯಿಕ ಕಲೆ, ಕರಕುಶಲ ಮತ್ತು ಸಾಂಸ್ಕೃತಿಕ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ. ವಿವಿಧ ದೇಶಗಳ ವಿಶಿಷ್ಟ ಉತ್ಪನ್ನಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮೂಲಕ ಪರಸ್ಪರ ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.
ಜಹ್ರಾ ಪೆಜೆಶ್ಕಿಯಾನ್ ಅವರ ಭೇಟಿಯ ಚಿತ್ರಗಳನ್ನು ಸಚಿವೆ ಅನ್ನಪೂರ್ಣ ದೇವಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಕಲೆ ಮತ್ತು ಕರಕುಶಲ ವಸ್ತುಗಳ ಇಂತಹ ಆಚರಣೆಗಳು ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ರಾಜಕೀಯ ಮತ್ತು ಆರ್ಥಿಕ ವಿಚಾರಗಳ ಚರ್ಚೆಗೆ ಸೀಮಿತವಾಗದೆ, ಕಲೆ, ಸಂಸ್ಕೃತಿ ಹಾಗೂ ಕರಕುಶಲ ಪರಂಪರೆಯ ಮೂಲಕವೂ ರಾಷ್ಟ್ರಗಳನ್ನು ಬೆಸೆಯುವ ವೇದಿಕೆಯಾಗಿ ಬ್ರಿಕ್ಸ್ ರೂಪುಗೊಳ್ಳುತ್ತಿರುವುದಕ್ಕೆ ಈ ಭೇಟಿ ಗಮನಾರ್ಹ ಉದಾಹರಣೆಯಾಗಿದೆ.