Featured, ಅಂಕಣ, ಸ್ಥಳೀಯ

ನಗರೋತ್ಥಾನ ಯೋಜನೆಯಡಿ ಸುಳ್ಯ ನಗರದ ವರ್ತುಲ ರಸ್ತೆ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನಕ್ಕೆ ಮನವಿ

ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ ಮನವಿ

ಸುಳ್ಯ: ನಗರೋತ್ಥಾನ ಯೋಜನೆಯಡಿ ಸುಳ್ಯ ನಗರದ ವರ್ತುಲ (ರಿಂಗ್) ರಸ್ತೆಗಳನ್ನು ಅಭಿವೃದ್ಧಿಪಡಿಸಲು ₹5 ಕೋಟಿ ವಿಶೇಷ ಅನುದಾನ ಮಂಜೂರು ಮಾಡುವಂತೆ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ಅವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಅವರು ಸೋಮವಾರ ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ ಅವರು ಸಚಿವರನ್ನು ಭೇಟಿ ಮಾಡಿ ಈ ಮನವಿ ಸಲ್ಲಿಸಿದರು.

ಸುಳ್ಯ ನಗರವು ರಾಜ್ಯದಲ್ಲಿಯೇ ಪ್ರಮುಖ ಶೈಕ್ಷಣಿಕ ನಗರಿಯಾಗಿ ಗುರುತಿಸಿಕೊಂಡಿದ್ದು, ದೇಶ-ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ನಗರವನ್ನು ಹಾದು ಹೋಗುವುದರ ಜೊತೆಗೆ ಕೇರಳ ರಾಜ್ಯ ಹಾಗೂ ಪ್ರವಾಸಿ ತಾಣವಾಗಿರುವ ಕೊಡಗು ಜಿಲ್ಲೆಯ ಗಡಿ ಪ್ರದೇಶಗಳಿಗೆ ಸುಳ್ಯ ಸಂಪರ್ಕ ಕಲ್ಪಿಸುತ್ತದೆ. ಇದರಿಂದಾಗಿ ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹಾಗೂ ಸಂಚಾರ ಸಮಸ್ಯೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಸಚಿವರ ಗಮನಕ್ಕೆ ತರಲಾಯಿತು.

ಈ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳೊಂದಿಗೆ ನಗರದ ವಿವಿಧ ಒಳರಸ್ತೆಗಳನ್ನು ಸಂಪರ್ಕಿಸುವ ರೀತಿಯಲ್ಲಿ ವರ್ತುಲ (ರಿಂಗ್) ರಸ್ತೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಕೆ.ಎಂ. ಮುಸ್ತಫ ಅವರು ತಿಳಿಸಿದರು.

ನಗರದ ಕೆಲವು ಭಾಗಗಳಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಖಾಸಗಿ ಭೂಮಾಲೀಕರು ತಮ್ಮ ಜಮೀನುಗಳನ್ನು ಬಿಟ್ಟುಕೊಡಲು ಸಿದ್ಧರಿರುವುದರಿಂದ, ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಇದಕ್ಕಾಗಿ ಅಗತ್ಯ ಅನುದಾನದ ಕೊರತೆಯಿದ್ದು, ನಗರೋತ್ಥಾನ ಯೋಜನೆಯಡಿ ₹5 ಕೋಟಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡುವಂತೆ ಸಚಿವರಲ್ಲಿ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ. ವೆಂಕಪ್ಪ ಗೌಡ, ಎಸ್. ಸಂಶುದ್ದೀನ್, ಶಾಫಿ ಕುತ್ತಾಮೊಟ್ಟೆ, ರಾಜು ಪಂಡಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Posts