Featured, ಇತರೆ

ನಾಟೆಕಲ್‌ನಲ್ಲಿ ದಾರುಲ್ ಮಅರಿಫ ಹಿಫ್ಳ್ ಹಾಗೂ ದರ್ಸ್ ಸಂಸ್ಥೆ ಉದ್ಘಾಟನೆ

ನಾಟೆಕಲ್: ಸುಮಾರು 21 ವರ್ಷಗಳಿಂದ ವಿವಿಧ ಪ್ರಮುಖ ಮೊಹಲ್ಲಾಗಳಲ್ಲಿ ಧಾರ್ಮಿಕ ಬೋಧನೆ, ದಅವಾ ಚಟುವಟಿಕೆಗಳು ಹಾಗೂ ಪಳ್ಳಿದರ್ಸ್‌ಗಳನ್ನು ನಡೆಸುವ ಮೂಲಕ ನೂರಾರು ಶಿಷ್ಯರನ್ನು ಸಮಾಜಕ್ಕೆ ಸಮರ್ಪಿಸಿದ ಪರಪ್ಪು ಐ.ಪಿ. ಅಬ್ದುರ್ರಝ್ಝಾಕ್ ಅಹ್ಸನಿ ಅಲ್ ಅಫ್ಝಲಿ ಉಸ್ತಾದರ ನೇತೃತ್ವದಲ್ಲಿ ನಾಟೆಕಲ್ ಸಮೀಪ ನೂತನವಾಗಿ ಸ್ಥಾಪಿಸಲಾದ ದಾರುಲ್ ಮಅರಿಫ ಎಜುಕೇಶನಲ್ ಟ್ರಸ್ಟ್‌ನ ಅಧೀನದ ಹಿಫ್ಳ್ ಹಾಗೂ ದರ್ಸ್ ಸಂಸ್ಥೆಯು ನವೆಂಬರ್ 1ರಂದು ಭಾನುವಾರ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉದ್ಘಾಟನೆ ಗೊಂಡಿತು.

ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 3 ಗಂಟೆಗೆ ಉಳ್ಳಾಲ ಸಯ್ಯಿದ್ ಮದನಿ ಮಖಾಂನಲ್ಲಿ ಅಬ್ದುರ್ರಶೀದ್ ಮದನಿ ಆಲಪ್ಪುಝ ಅವರ ನೇತೃತ್ವದಲ್ಲಿ ಝಿಯಾರತ್ ನೆರವೇರಿತು. ಈ ಸಂದರ್ಭದಲ್ಲಿ ದರ್ಗಾ ಸಮಿತಿ ಅಧ್ಯಕ್ಷ ಹನೀಫ್ ಹಾಜಿ ಉಳ್ಳಾಲ ಸೇರಿದಂತೆ ಹಲವು ಉಲಮಾ-ಉಮರಾಗಳು ಉಪಸ್ಥಿತರಿದ್ದರು.

ಅಸರ್ ನಮಾಝಿನ ಬಳಿಕ ಸಂಸ್ಥೆಯ ಆವರಣದಲ್ಲಿ ಅಲ್ ರಾತಿಬುಲ್ ಕುಬ್ರಾ ನಾಗೂರು ಮಜ್ಲಿಸ್ ನಡೆಯಿತು. ಅಸ್ಸಯ್ಯಿದ್ ಅಲವಿ ಅಲ್ ಬುಖಾರಿ ಕರ್ಕಿ ತಂಙಳ್ ಅವರು ಮಜ್ಲಿಸ್‌ಗೆ ನೇತೃತ್ವ ನೀಡಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.

ಸಂಸ್ಥೆಯ ಸಾರಥಿ ಐ.ಪಿ. ಅಬ್ದುರ್ರಝ್ಝಾಕ್ ಅಹ್ಸನಿ ಉಸ್ತಾದರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಎರಡು ದಶಕಗಳಿಂದ ದರ್ಸ್ ಶಿಕ್ಷಣದ ಯಶಸ್ವಿ ಮುನ್ನಡೆಗೆ ಸಹಕಾರ ನೀಡಿದ ಹಾಗೂ ನೂತನ ಸಂಸ್ಥೆಯ ಸ್ಥಾಪನೆಗೆ ಬೆಂಬಲ ನೀಡುತ್ತಿರುವ ಎಲ್ಲರನ್ನೂ ಸ್ಮರಿಸಿದರು. ಸಂಸ್ಥೆಯ ಮುಂದಿನ ಶೈಕ್ಷಣಿಕ ಚಟುವಟಿಕೆಗಳ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಗ್ರಿಬ್ ನಮಾಝಿನ ಬಳಿಕ ಅಸ್ಸಯ್ಯಿದ್ ಪೂಕುಂಞಿ ತಂಙಳ್ ಉದ್ಯಾವರ ಅವರು ದುಆ ಹಾಗೂ ಧಾರ್ಮಿಕ ಉಪದೇಶ ನೀಡುವ ಮೂಲಕ ನೂತನ ದರ್ಸ್ ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ನೀಡಿದರು.

ವಿವಿಧ ಶೈಕ್ಷಣಿಕ ವಿಭಾಗಗಳು: ನೂತನ ಸಂಸ್ಥೆಯ ಅಧೀನದಲ್ಲಿ ದಾರುಲ್ ಮಅರಿಫ ಹಿಫ್ಳುಲ್ ಖುರ್‌ಆನ್, ದಾರುಲ್ ಮಅರಿಫ ಜನರಲ್ ಮದ್ರಸ, ದಾರುಲ್ ಮಅರಿಫ ಇಂಗ್ಲಿಷ್ ಮೀಡಿಯಂ ಮದ್ರಸ ಹಾಗೂ ದಾರುಲ್ ಮಅರಿಫ ಹನಫಿ ಮದ್ರಸ ಸೇರಿದಂತೆ ವಿವಿಧ ಧಾರ್ಮಿಕ ಶೈಕ್ಷಣಿಕ ವಿಭಾಗಗಳು ಕಾರ್ಯನಿರ್ವಹಿಸಲಿವೆ.

ಕಾರ್ಯಕ್ರಮದಲ್ಲಿ ಸಂಬಾರತ್ತೋಟ ಜಮಾಅತ್ ಅಧ್ಯಕ್ಷ ಇಬ್ರಾಹಿಂ ಹಾಜಿ ಸೇರಿದಂತೆ ಹಲವು ಗಣ್ಯರು, ಉಲಮಾಗಳು, ದರ್ಸ್ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ನೂರಾರು ಮಂದಿ ಭಾಗವಹಿಸಿದ್ದರು.

Related Posts