ಫುಜೈರಾ (ಯುಎಇ): ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಫುಜೈರಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂರು ವರ್ಷದ ಮಗು ಸೇರಿದಂತೆ ಕೇರಳ ಮೂಲದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
ಮೃತರನ್ನು ಕೇರಳದ ಮಲಪ್ಪುರಂ ಜಿಲ್ಲೆಯ ವೆಂಗಾರಾದ ಕುಂದಿಲ್ಪಾರ ಮೂಲದ ಸಿದ್ದಿಕ್ ಅವರ ಕುಟುಂಬದ ಮುಹಮ್ಮದ್ ಅಸ್ಮಿಲ್ (21), ಮಿಸ್ನಾ ಜುಬಿನ್ (21) ಹಾಗೂ ಮಿಸ್ನಾ ಅವರ ಮೂರು ವರ್ಷದ ಪುತ್ರ ಮುಹಮ್ಮದ್ ಫೈಜ್ ಎಂದು ಗುರುತಿಸಲಾಗಿದೆ.
ಬುಧವಾರ ಮಧ್ಯರಾತ್ರಿ ಕಳೆದ ಬಳಿಕ ಫುಜೈರಾ ಎಮಿರೇಟ್ನ ಪ್ರವೇಶ ದ್ವಾರದ ಸಮೀಪವಿರುವ ಶೇಖ್ ಖಲೀಫಾ ಬಿನ್ ಜಾಯೆದ್ ರಸ್ತೆಯಲ್ಲಿ, ನ್ಯಾಯಾಲಯದ ಮುಂಭಾಗ ಈ ದುರ್ಘಟನೆ ಸಂಭವಿಸಿದೆ.
ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು, ಮುಂದೆ ಸಂಚರಿಸುತ್ತಿದ್ದ ಟ್ರಕ್ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ದುರ್ಘಟನೆಯಿಂದಾಗಿ ಕೇರಳ ಮೂಲದ ಒಂದೇ ಕುಟುಂಬದ ಮೂವರು ಪ್ರಾಣ ಕಳೆದುಕೊಂಡಿರುವುದು ದುರಂತಕ್ಕೆ ಕಾರಣವಾಗಿದೆ.