ಜೆರುಸಲೇಂ: ಇಸ್ರೇಲ್ನ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಯಾಶರ್ ಪಕ್ಷದ ಅಧ್ಯಕ್ಷ ಗಡಿ ಐಸೆನ್ಕೋಟ್ ಮತ್ತು ಡೆಮೋಕ್ರಾಟ್ ಪಕ್ಷದ ಅಧ್ಯಕ್ಷ ಯೈರ್ ಗೋಲನ್ ಅವರು ಸಮ್ಮಿಶ್ರ ಸರ್ಕಾರ ರಚನೆಗೆ ಸಂಬಂಧಿಸಿದಂತೆ ತಾತ್ವಿಕ ಒಪ್ಪಂದಕ್ಕೆ ಬಂದಿದ್ದಾರೆ. ಮಾತುಕತೆ ಪುನರಾರಂಭಗೊಂಡ ಕೆಲವೇ ಗಂಟೆಗಳಲ್ಲಿ ಎರಡೂ ಪಕ್ಷಗಳು ಮಹತ್ವದ ಪ್ರಗತಿಯನ್ನು ಘೋಷಿಸಿವೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷದೊಂದಿಗೆ ಯಾಶರ್ ಪಕ್ಷವು ಏಕತಾ ಸರ್ಕಾರ ರಚಿಸುವ ಸಾಧ್ಯತೆಯನ್ನು ವಿರೋಧಿಸಿ ಡೆಮೋಕ್ರಾಟ್ ಪಕ್ಷ ಈ ವಾರದ ಆರಂಭದಲ್ಲಿ ಮಾತುಕತೆಯಿಂದ ಹಿಂದೆ ಸರಿದಿತ್ತು. ಆದರೆ ಗುರುವಾರ ಬೆಳಿಗ್ಗೆ ಮಾತುಕತೆಗಳು ಪುನರಾರಂಭಗೊಂಡಿರುವುದನ್ನು ಗಡಿ ಐಸೆನ್ಕೋಟ್ ದೃಢಪಡಿಸಿದ್ದಾರೆ.
ತಾತ್ವಿಕ ಒಪ್ಪಂದದ ಪ್ರಕಾರ ಡೆಮೋಕ್ರಾಟ್ ಪಕ್ಷಕ್ಕೆ ನಾಲ್ಕು ಪ್ರಮುಖ ಖಾತೆಗಳು ಲಭಿಸಲಿವೆ. ವಿಸ್ತೃತ ಅಧಿಕಾರ ವ್ಯಾಪ್ತಿಯ ಆಂತರಿಕ ಭದ್ರತಾ ಖಾತೆ, ಕಾರ್ಮಿಕ ಮತ್ತು ಕಲ್ಯಾಣ, ಸಂವಹನ ಹಾಗೂ ಸಂಸ್ಕೃತಿ ಮತ್ತು ಕ್ರೀಡಾ ಖಾತೆಗಳು ಇದರಲ್ಲಿ ಸೇರಿವೆ. ಆಂತರಿಕ ಭದ್ರತಾ ಸಚಿವರಾಗಿ ಯೈರ್ ಗೋಲನ್ ಕಾರ್ಯನಿರ್ವಹಿಸಲಿದ್ದಾರೆ. ಸಂಸ್ಕೃತಿ ಮತ್ತು ಕ್ರೀಡಾ ಇಲಾಖೆಯ ವ್ಯಾಪ್ತಿಯಲ್ಲಿ ‘ಪ್ರಜಾಪ್ರಭುತ್ವಕ್ಕಾಗಿ ಹೊಸ ಆಡಳಿತ’ ಎಂಬ ವ್ಯವಸ್ಥೆಯನ್ನೂ ರೂಪಿಸಲು ಉದ್ದೇಶಿಸಲಾಗಿದೆ.
ಇದರ ಜೊತೆಗೆ ಸಾಮಾಜಿಕ ಸಮಾನತೆ ಸಚಿವಾಲಯದ ಜವಾಬ್ದಾರಿಯನ್ನೂ ಡೆಮೋಕ್ರಾಟ್ ಪಕ್ಷ ವಹಿಸಿಕೊಳ್ಳಲಿದೆ. ನೆಸ್ಸೆಟ್ನ ಸಂವಿಧಾನ ಸಮಿತಿಯ ಅಧ್ಯಕ್ಷ ಸ್ಥಾನವೂ ಪಕ್ಷಕ್ಕೆ ದೊರೆಯಲಿದೆ. ನ್ಯಾಯಾಂಗ ನೇಮಕಾತಿ ಸಮಿತಿಯಲ್ಲಿ ಪಕ್ಷದ ಓರ್ವ ಪ್ರತಿನಿಧಿಗೆ ಸ್ಥಾನ ನೀಡಲಾಗುವುದು. ಮತ್ತೊಬ್ಬ ಪ್ರತಿನಿಧಿ ಸರ್ಕಾರ ಮತ್ತು ನೆಸ್ಸೆಟ್ ನಡುವಿನ ಸಂಪರ್ಕ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ.
ನ್ಯಾಯಾಂಗ ವ್ಯವಸ್ಥೆಯ ಸ್ವಾತಂತ್ರ್ಯವನ್ನು ಕಾಪಾಡುವುದು, ನ್ಯಾಯಾಂಗ ಸುಧಾರಣೆಯ ಹೆಸರಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ಮರುಪರಿಶೀಲಿಸುವುದು ಹಾಗೂ ‘ಆಡಳಿತ ದಂಗೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ’ ಬದ್ಧತೆಯೂ ಒಪ್ಪಂದದ ಪ್ರಮುಖ ಅಂಶಗಳಾಗಿವೆ ಎಂದು ಡೆಮೋಕ್ರಾಟ್ ಪಕ್ಷ ತಿಳಿಸಿದೆ.
ಡೆಮೋಕ್ರಾಟ್ ಪಕ್ಷ ಆರಂಭದಲ್ಲಿ ನ್ಯಾಯಾಂಗ ಖಾತೆಗೆ ಬೇಡಿಕೆ ಇಟ್ಟಿತ್ತಾದರೂ, ಅಂತಿಮವಾಗಿ ಆ ಬೇಡಿಕೆಯನ್ನು ಕೈಬಿಟ್ಟು ರಾಜಿ ಮಾಡಿಕೊಳ್ಳಲು ಸಮ್ಮತಿಸಿದೆ.
ಈ ಕುರಿತು ಪಕ್ಷದ ಪ್ರಕಟಣೆಯಲ್ಲಿ, “ಬದಲಾವಣೆಯ ಸರ್ಕಾರವನ್ನು ರಚಿಸುವ ನಮ್ಮ ಬದ್ಧತೆ ಹಾಗೂ ರಾಷ್ಟ್ರೀಯ ಜವಾಬ್ದಾರಿಯ ಹಿನ್ನೆಲೆಯಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸುವುದು, ಒಪ್ಪಂದಕ್ಕೆ ಬರುವುದು ಮತ್ತು ರಾಜಿ ಮಾಡಿಕೊಳ್ಳುವ ಮನೋಭಾವ ಪ್ರದರ್ಶಿಸುವುದು ಅಗತ್ಯವಾಗಿದೆ” ಎಂದು ತಿಳಿಸಲಾಗಿದೆ.
“ಈ ಒಪ್ಪಂದದ ಮೂಲಕ ನೆತನ್ಯಾಹು ನೇತೃತ್ವದ ಸರ್ಕಾರವನ್ನು ಅಂತ್ಯಗೊಳಿಸಲು ಮತ್ತು ಇಸ್ರೇಲಿ ಪ್ರಜಾಪ್ರಭುತ್ವವನ್ನು ಉಳಿಸಲು ದಾರಿ ಮಾಡಿಕೊಡುತ್ತಿದ್ದೇವೆ” ಎಂದು ಡೆಮೋಕ್ರಾಟ್ ಪಕ್ಷ ಹೇಳಿದೆ.
ಸದ್ಯ ಎರಡೂ ಪಕ್ಷಗಳ ನಡುವೆ ತಾತ್ವಿಕ ಒಮ್ಮತ ಮೂಡಿದ್ದು, ಅಧಿಕೃತ ಸಹಿ ಹಾಕುವ ಮೊದಲು ಒಪ್ಪಂದದ ಅಂತಿಮ ಅಂಶಗಳು ಮತ್ತು ವಿವರಗಳನ್ನು ಪೂರ್ಣಗೊಳಿಸುವ ಪ್ರಕ್ರಿಯೆ ಮುಂದುವರಿದಿದೆ.