Featured, ಅಂಕಣ, ಸ್ಥಳೀಯ

ಮಾಲೂರು ವಿಧಾನಸಭಾ ಕ್ಷೇತ್ರ: ಮರುಮತ ಎಣಿಕೆಗೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ, ಅಕ್ಟೋಬರ್ 14:ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದ ಕೆ.ವೈ. ನಂಜೇಗೌಡರ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ದ ಸುಪ್ರೀಂ ಕೋರ್ಟ್, ಇದೀಗ ಮತಗಳ ಮರು ಎಣಿಕೆಗೆ ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್ ನೀಡಿದ ತಾಜಾ ಆದೇಶದಂತೆ, ರಾಜ ಚುನಾವಣಾ ಆಯೋಗವು ಮರು ಎಣಿಕೆ ಪ್ರಕ್ರಿಯೆಯನ್ನು ನಡೆಸಿ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದೆ.

ಪ್ರಕರಣದ ಹಿನ್ನೆಲೆ:

2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ. ನಂಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಗೌಡರನ್ನು ಕೇವಲ 248 ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ, ಮಂಜುನಾಥ್ ಗೌಡ ಅವರು ಮತ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.

ಅವರ ದೂರಿನ ಪ್ರಕಾರ, ಎಣಿಕೆ ಕೇಂದ್ರದಲ್ಲಿ ಸ್ಪರ್ಧಿಸಿದ್ದ 15 ಮಂದಿ ಅಭ್ಯರ್ಥಿಗಳ ಏಜೆಂಟ್‌ಗಳಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗಿಲ್ಲ, ಮತ್ತು ಎಣಿಕೆ ಕಾರ್ಯವನ್ನು ಎರಡು ಪ್ರತ್ಯೇಕ ಕೊಠಡಿಗಳಲ್ಲಿ ನಡೆಸಲಾಗಿದೆ, ಇದು ಜನಪ್ರತಿನಿಧಿಗಳ ಕಾಯ್ದೆ ಹಾಗೂ ಚುನಾವಣಾ ಆಯೋಗದ ನಿಯಮಗಳಿಗೆ ವಿರುದ್ಧವಾಗಿದೆ.

ಈ ಹಿನ್ನೆಲೆಯಲ್ಲಿ, ಕರ್ನಾಟಕ ಹೈಕೋರ್ಟ್ ಹಿಂದೆ ನಂಜೇಗೌಡರ ಆಯ್ಕೆಯನ್ನು ರದ್ದುಪಡಿಸಿ, ಮರು ಎಣಿಕೆ ನಡೆಸಿ ನಾಲ್ಕು ವಾರಗಳಲ್ಲಿ ಫಲಿತಾಂಶ ಪ್ರಕಟಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು.

ಇದೀಗ ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ಆದೇಶಕ್ಕೆ ಬದಲಾವಣೆ ಮಾಡದೇ, ಮಾಲೂರು ಕ್ಷೇತ್ರದ ಮತಗಳ ಮರು ಎಣಿಕೆಯನ್ನು ನಡೆಸುವಂತೆ ಹಾಗೂ ಫಲಿತಾಂಶವನ್ನು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸ್ಪಷ್ಟ ಸೂಚನೆ ನೀಡಿದೆ.

m

Related Posts