Featured, ಇತರೆ, ಸ್ಥಳೀಯ

ಸುಳ್ಯ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ — ವೈರಲ್ ಆಡಿಯೊದಿಂದ ಬೆಳಕಿಗೆ ಬಂದ ವಿಚಿತ್ರ ಘಟನೆ!

ಸಾಧಾರಣವಾಗಿ ದೊಡ್ಡ ಟ್ರಕ್ ಹಾಗೂ ಲಾರಿ ಚಾಲಕರು ರಾತ್ರಿ ಹೊತ್ತಿನಲ್ಲಿ ದೀರ್ಘ ಪ್ರಯಾಣದ ವೇಳೆ ಮಂಪರು ನಿದ್ರೆ ಆವರಿಸುವ ಸಂದರ್ಭಗಳಲ್ಲಿ, ಯಾವುದೇ ಅಪಘಾತ ಅಥವಾ ಸಾರ್ವಜನಿಕ ಅಸೌಕರ್ಯ ಉಂಟಾಗದಂತೆ ವಿಶಾಲವಾದ ತೆರೆಯಾದ ಜಾಗದಲ್ಲಿ ವಾಹನವನ್ನು ನಿಲ್ಲಿಸಿ ಕೆಲವು ಗಂಟೆಗಳ ಕಾಲ ವಿಶ್ರಾಂತಿ ಪಡೆಯುತ್ತಾರೆ. ಬಳಿಕ ಚೈತನ್ಯದಿಂದ ಮತ್ತೆ ಪ್ರಯಾಣ ಮುಂದುವರಿಸುವುದು ಇವರ ನಿಯಮಿತ ಕ್ರಮವಾಗಿದೆ.

ಸುಳ್ಯದಲ್ಲಿ ನಡೆದ ಒಂದು ಅಚ್ಚರಿಯ ಘಟನೆಯಲ್ಲಿ, ಲಾರಿ ಚಾಲಕನ ಸಮಯಪ್ರಜ್ಞೆಯಿಂದ ಒಬ್ಬ ವ್ಯಕ್ತಿಯ ಜೀವ ಉಳಿದಿದೆ. ಈ ಘಟನೆಗೆ ಸಂಬಂಧಿಸಿದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾಹಿತಿಯ ಪ್ರಕಾರ, ಸುಳ್ಯ ತಾಲೂಕಿನ ಅರಂಬೂರು ಪ್ರದೇಶದ ಕಾಫಿ ಡೇ ಬಳಿ ಇರುವ ವಿಶಾಲವಾದ ತೆರೆಯಾದ ಜಾಗದಲ್ಲಿ ಲಾರಿ ಚಾಲಕನು ರಾತ್ರಿ ವೇಳೆ ವಾಹನವನ್ನು ನಿಲ್ಲಿಸಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿದ್ದನು. ಅದೇ ವೇಳೆ ಮಧ್ಯಪಾನ ಮಾಡಿದ ಒಬ್ಬ ವ್ಯಕ್ತಿ ಚಾಲಕನ ಅರಿವಿಗೆ ಬಾರದೆ ಟ್ರಕ್‌ನ ಅಡಿಯಲ್ಲಿ, ಟಯರ್ ಪಕ್ಕದಲ್ಲಿ ಮಲಗಿದ್ದಾನೆ.

ಇದೀಗ ಚಳಿಗಾಲ ಆರಂಭವಾಗಿರುವುದರಿಂದ ಟ್ರಕ್‌ನ ಕೆಳಭಾಗದಲ್ಲಿ ಬೆಚ್ಚಗಿನ ಹವಾ ಇರುವ ಕಾರಣ, ಆ ವ್ಯಕ್ತಿ ಆ ಸ್ಥಳದಲ್ಲೇ ಸುಮ್ಮನೆ ನಿದ್ರೆಗೆ ಜಾರಿದ್ದಾನೆ.

ಕೆಲ ಹೊತ್ತಿನ ಬಳಿಕ ವಿಶ್ರಾಂತಿ ಮುಗಿಸಿದ ಚಾಲಕ ಟ್ರಕ್ ಚಲಾಯಿಸಲು ಸಜ್ಜಾಗುವ ಮುನ್ನ ಟಯರ್‌ಗಳಲ್ಲಿ ಗಾಳಿ ಸರಿಯಾಗಿದೆಯೇ ಎಂದು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಟ್ರಕ್‌ನ ಅಡಿಯಲ್ಲಿ ಮಲಗಿದ್ದ ವ್ಯಕ್ತಿಯನ್ನು ಗಮನಿಸಿ ದಂಗಾಗಿದ್ದಾನೆ. ಕೂಡಲೇ ಮಲಗಿದ ವ್ಯಕ್ತಿಯನ್ನು ಎಬ್ಬಿಸಿ ಬುದ್ದಿವಾದ ಹೇಳಿ ಕಳುಹಿಸಿದ್ದಾನೆ ಎಲ್ಲಿಯಾದರೂ ಚಾಲಕ ಲಾರಿಯ ಚಕ್ರದ ಪರಿಶೀಲನೆ ನಡೆಸದೆ ಸೀದಾ ಗಾಡಿ ಚಲಾಯಿಸಿದರೆ ವ್ಯಕ್ತಿ ಲಾರಿಯ ಚಕ್ರದಡಿ ಸಿಲುಕಿ ದುರಂತ ಸಂಭವಿಸುತ್ತಿತ್ತು ! ಚಾಲಕನ ಸಮಯಪ್ರಜ್ಜೆ  ಮತ್ತು ಎಚ್ಚರಿಕೆಯಿಂದ ಒಂದು ಪ್ರಾಣ ಅಪಾಯದಿಂದ ಪಾರಾಗಿದ್ದು, ಈ ಘಟನೆಯ ಆಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಡುತ್ತಿದೆ.

Related Posts