ಬಂಟ್ವಾಳ : ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಜ್ಯೋತಿ ಎಂಬ ಹಿಂದೂ ಮಹಿಳೆ ಬಿ ಸಿ ರೋಡಿನ ಜವಳಿ ವ್ಯಾಪಾರಿಯಾದ ತನ್ನ ಪತಿ ಕೃಷ್ಣ ಪ್ರಸಾದ್ ಎಂಬವರ ಮೇಲೆ ಅಂಗಡಿಗೆ ನುಗ್ಗಿ ಕತ್ತಿಯಿಂದ ಹಲ್ಲೆ ನಡೆಸಿದ್ದು, ಹಲ್ಲೆ ನಡೆಸುವ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರ ಸಾಂಪ್ರದಾಯಿಕ ವಸ್ತ್ರವಾದ ಬುರ್ಖಾವನ್ನು ಧರಿಸಿ ಕೃತ್ಯ ಎಸಗಿದ್ದಾರೆ. ಈ ಘಟನೆಯನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಶಿನೀರ ತೀವ್ರವಾಗಿ ಖಂಡಿಸಿದ್ದಾರೆ.
ಮುಸ್ಲಿಮ್ ಮಹಿಳೆಯರ ಧಾರ್ಮಿಕ ಆಚರಣೆಯ ಭಾಗವಾಗಿರುವ ಬುರ್ಖಾವನ್ನು, ಅಪರಾಧಿ ಕೃತ್ಯಗಳಿಗೆ ದುರ್ಬಳಕೆ ಮಾಡುವುದು ಸರಿಯಲ್ಲ. ಬುರ್ಖಾ ಪದ್ಧತಿಯು ಇಸ್ಲಾಂ ಧಾರ್ಮಿಕತೆಯ ಹೊರತಾಗಿಯೂ, ಮಹಿಳೆಯರಿಗೆ ಸುರಕ್ಷತೆ, ಸಭ್ಯತೆ ಮತ್ತು ಘನತೆಯ ಪ್ರತೀಕವಾಗಿದೆ. ಇದು ದೇಹವನ್ನು ಮರೆಮಾಚುವ ಒಂದು ಸಂಸ್ಕೃತಿಯೇ ಹೊರತು ದುಷ್ಕ್ರತ್ಯಗಳಿಗೆ ಬಳಸುವ ಅಸ್ತ್ರವಲ್ಲ ಎಂದು ಹೇಳಿದ್ದಾರೆ. ಇಂತಹ ಕೃತ್ಯಗಳಿಂದ ಬುರ್ಖಾ ಕುರಿತಾಗಿ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುತ್ತಿದೆ.
ಧಾರ್ಮಿಕ ಸಂಪ್ರದಾಯ ಮತ್ತು ವಸ್ತ್ರ ಪದ್ದತಿಯನ್ನು ದುರ್ಬಳಕೆ ಮಾಡುವ ಆರೋಪಿಗಳಿಗೆ ಪೊಲೀಸ್ ಇಲಾಖೆಯು ಸೂಕ್ತ ಮತ್ತು ಕಠಿಣ ಕ್ರಮಗಳನ್ನು ಕೈ ಗೊಳ್ಳಬೇಕೆಂದು ಮಹಿಳಾ ಸಬಲೀಕರಣಕ್ಕೆ ಹೋರಾಟ ನಡೆಸುತ್ತಿರುವ ವಿಮನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಒತ್ತಾಯಿಸಿದೆ.





m
