ಇತರೆ, ಸ್ಥಳೀಯ

ಸುಳ್ಯ : ಹಳೆ ಬಸ್ ನಿಲ್ದಾಣದ ಆವರಣ ರಸ್ತೆ ವರ್ಷಗಳ ನಿರ್ಲಕ್ಷ್ಯಕ್ಕೆ ತೆರೆ : ನಿಲ್ದಾಣದ ಆವರಣ ರಸ್ತೆ ಅಭಿವೃದ್ಧಿಗೆ ಮುನ್ನುಡಿ

ಮಾಜಿ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ರವರ ಮುತುವರ್ಜಿಯಿಂದ ಹಳೆ ಬಸ್ ನಿಲ್ದಾಣದ ಆವರಣ ರಸ್ತೆಗೆ ಕಾಯಕಲ್ಪ

ಸುಳ್ಯ ಪಟ್ಟಣದ ಹಳೆ ಬಸ್ ನಿಲ್ದಾಣದ ಆವರಣದ ಡಾಮರು ರಸ್ತೆ ಹಲವು ವರ್ಷಗಳಿಂದ ತೀವ್ರವಾಗಿ ಹದಗೆಟ್ಟು ಶಿಥಿಲಗೊಂಡ ಸ್ಥಿತಿಯಲ್ಲಿತ್ತು. ಡಾಮರು ರಸ್ತೆಯ ಘನ ಗಾತ್ರದ ಜಲ್ಲಿಕಲ್ಲುಗಳು ಮೇಲಕ್ಕೆ ಎದ್ದು ವಾಹನಗಳ ಚಕ್ರಗಳಿಗೆ ಸಿಲುಕಿ, ಪಕ್ಕದ ಅಂಗಡಿಗಳಿಗೆ ಹಾನಿ ಉಂಟಾಗುತ್ತಿತ್ತು. ಇದೇ ವೇಳೆ ಪಾದಚಾರಿಗಳು ಗಾಯಗೊಳ್ಳುವ ಘಟನೆಗಳು ಕೂಡ ವರದಿಯಾಗುತ್ತಿದ್ದವು. ವಾಹನ ಸಂಚಾರಕ್ಕೆ ಮಾತ್ರವಲ್ಲ, ಸಾರ್ವಜನಿಕರು ನಡೆದುಕೊಂಡು ಸಂಚರಿಸುವುದಕ್ಕೂ ಈ ರಸ್ತೆ ಅತ್ಯಂತ ದುಸ್ಥಿತಿಯಲ್ಲಿದ್ದು, ದಿನನಿತ್ಯ ಪ್ರಯಾಣಿಕರು ಹಾಗೂ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು.

ಈ ಸಮಸ್ಯೆ ಕುರಿತು ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ನಿರೀಕ್ಷಿತ ಸ್ಪಂದನೆ ದೊರಕದೆ ಸಮಸ್ಯೆ ಹಾಗೆಯೇ ಮುಂದುವರಿದಿತ್ತು. ಪರಿಣಾಮ ಸಾರ್ವಜನಿಕರ ಆಕ್ರೋಶ ಮತ್ತು ಅಸಮಾಧಾನ ಹೆಚ್ಚಾಗುತ್ತಿತ್ತು. ಇಂತಹ ಸಂದರ್ಭದಲ್ಲೇ ಮಾಜಿ ಪಂಚಾಯತ್ ಸದಸ್ಯ ಉಮ್ಮರ್ ಕೆ.ಎಸ್. ಹಾಗೂ ಮಾಜಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅವರುಗಳ ಹೆಚ್ಚಿನ ಮುತುವರ್ಜಿಯಿಂದ ಹಳೆ ಬಸ್ ನಿಲ್ದಾಣದ ಆವರಣ ರಸ್ತೆಗೆ ಇದೀಗ ಹೊಸದಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಈ ಅಭಿವೃದ್ಧಿ ಕಾರ್ಯದಿಂದ ವಾಹನ ಚಾಲಕರು, ಪಾದಚಾರಿಗಳು ಹಾಗೂ ಸುತ್ತಮುತ್ತಲ ವ್ಯಾಪಾರಿಗಳಿಗೆ ಬಹುವಾಗಿ ಉಪಕಾರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಸಾರ್ವಜನಿಕರ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿ ರಸ್ತೆ ಅಭಿವೃದ್ಧಿಗೆ ಮುಂದಾದ ಜನಪ್ರತಿನಿಧಿಗಳ ಈ ಕ್ರಮಕ್ಕೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ವೇಗ ಪಡೆಯಲಿ ಎಂಬ ಆಶಯವೂ ವ್ಯಕ್ತವಾಗಿದೆ.

 

Related Posts