ನವದೆಹಲಿ: ಬಿಜೆಪಿ ನಾಯಕ ನಿತಿನ್ ನಬಿನ್ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಜನವರಿ 20ರಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಪಕ್ಷದ 36 ರಾಜ್ಯ ಘಟಕಗಳ ಪೈಕಿ 30 ರಾಜ್ಯಗಳಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಇದು ಪಕ್ಷದ ಸಂವಿಧಾನದ ಪ್ರಕಾರ ಅಗತ್ಯವಿರುವ ಕನಿಷ್ಠ 50 ಪ್ರತಿಶತಕ್ಕಿಂತ ಹೆಚ್ಚಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಚುನಾವಣಾ ಅಧಿಕಾರಿ ಡಾ. ಕೆ. ಲಕ್ಷ್ಮಣ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಯಾವುದೇ ವಿರೋಧವಿಲ್ಲದೆ ನಿತಿನ್ ನಬಿನ್ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ನೇತೃತ್ವದಲ್ಲಿ ಪಕ್ಷ ಸಂಘಟನಾತ್ಮಕವಾಗಿ ಮತ್ತಷ್ಟು ಬಲ ಪಡೆಯಲಿದೆ ಎಂಬ ವಿಶ್ವಾಸವನ್ನು ಪಕ್ಷದ ನಾಯಕರು ವ್ಯಕ್ತಪಡಿಸಿದ್ದಾರ
ನಿತಿನ್ ನಬಿನ್ ಬೆಳೆದು ಬಂದ ದಾರಿ..!!!
ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಿತೀನ್ ನಬಿನ್ ಅವರು ಸಂಘಟನಾ ರಾಜಕಾರಣದಲ್ಲಿ ಬೆಳೆದ ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಬಿಹಾರ ಮೂಲದ ಈ ನಾಯಕ 2026ರ ಜನವರಿಯಲ್ಲಿ ಅನಿರೋಧಿತವಾಗಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಮೂಲಕ ಪಕ್ಷದ ಇತಿಹಾಸದಲ್ಲಿ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ದಾಖಲೆ ನಿರ್ಮಿಸಿದ್ದಾರೆ.
1980ರ ಮೇ 23ರಂದು ಪಾಟ್ನಾ ನಗರದಲ್ಲಿ ಜನಿಸಿದ ನಿತೀನ್ ನಾಬಿನ್ ಅವರು ಕಾನೂನು ಪದವೀಧರರಾಗಿದ್ದು, ವಿದ್ಯಾರ್ಥಿ ರಾಜಕೀಯದಿಂದಲೇ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟವರು. ಸರಳ ಮಧ್ಯಮವರ್ಗದ ಕುಟುಂಬದಿಂದ ಬಂದ ಅವರು, ಬಿಜೆಪಿ ಯುವ ಮೋರ್ಚಾದ ಮೂಲಕ ರಾಜಕೀಯ ಹಾದಿ ಹಿಡಿದು ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
ಯುವ ಮೋರ್ಚಾದಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ನಾಬಿನ್ ಅವರು, ಬಳಿಕ ಬಿಹಾರದ ಪಾಟ್ನಾ ಬ್ಯಾಂಕೀಪುರ ವಿಧಾನಸಭಾ ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದರು. ಬಿಹಾರ ರಾಜ್ಯ ಸರ್ಕಾರದಲ್ಲಿ ರಸ್ತೆ ನಿರ್ಮಾಣ, ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆಗಳ ಜವಾಬ್ದಾರಿಯನ್ನು ವಹಿಸಿಕೊಂಡು ಆಡಳಿತಾತ್ಮಕ ಅನುಭವ ಗಳಿಸಿದರು.
ಸಂಘಟನೆ ಬಲಪಡಿಸುವಲ್ಲಿ ಅವರ ಕಾರ್ಯಶೈಲಿ, ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಮತ್ತು ಶಿಸ್ತುಬದ್ಧ ಕಾರ್ಯನಿರ್ವಹಣೆ ಕೇಂದ್ರ ನಾಯಕರ ಗಮನ ಸೆಳೆದಿತ್ತು. ಇದರ ಫಲವಾಗಿ 2026ರಲ್ಲಿ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.
ಯುವಶಕ್ತಿ, ಸಂಘಟನಾ ಸಾಮರ್ಥ್ಯ ಮತ್ತು ಅನುಭವದ ಸಮನ್ವಯ ಹೊಂದಿರುವ ನಿತೀನ್ ನಬಿನ್ ಅವರು ಮುಂದಿನ ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.

