ಶಾಲಾ ಕಟ್ಟಡ ಉದ್ಘಾಟನೆಗೆ ಆಗಮಿಸಿರುವುದು ಅಪಾರ ಸಂತಸ ತಂದಿದೆ : ಶಾಸಕಿ ಭಾಗೀರಥಿ ಮುರುಳ್ಯ

ಕಡಬ ತಾಲ್ಲೂಕಿನ ದೇರಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಶಾಲಾ ಕೊಠಡಿಯ ಉದ್ಘಾಟನಾ ಸಮಾರಂಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಭಾಗವಹಿಸಿ ಮಾತನಾಡಿದರು.
ಪ್ರಥಮ ಬಾರಿಗೆ ಶಾಸಕಿಯಾಗಿ ರಂಗಮಂದಿರ ಉದ್ಘಾಟನೆ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡ ಅವರು, ಇದೀಗ ಶಾಲಾ ಕಟ್ಟಡ ಉದ್ಘಾಟನೆಗೆ ಆಗಮಿಸಿರುವುದು ಅಪಾರ ಸಂತಸ ತಂದಿದೆ ಎಂದು ಹೇಳಿದರು.
ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ನೆರವು ಸೀಮಿತವಾಗಿರುವ ಹಿನ್ನೆಲೆಯಲ್ಲಿ, ಊರಿನ ಜನರ ಸಹಕಾರ ಮತ್ತು ದಾನಿಗಳ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು. ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಉದ್ದೇಶಕ್ಕೆ ಮಾತ್ರ ಸೀಮಿತವಾಗಬಾರದು; ಅದು ಜ್ಞಾನಾರ್ಜನೆಗೆ ಮತ್ತು ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡಬೇಕು ಎಂದು ಒತ್ತಿ ಹೇಳಿದರು.
ಮಕ್ಕಳು ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಸೇರಿದಂತೆ ಸ್ವಾವಲಂಬಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಇತರರಿಗೆ ಉದ್ಯೋಗ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಉಳಿಸಿಕೊಳ್ಳಲು ಹಿರಿಯರ ಮಾರ್ಗದರ್ಶನವನ್ನು ಅನುಸರಿಸುವುದು ಅಗತ್ಯವೆಂದರು.

ಶಿಕ್ಷಣದ ಜೊತೆಗೆ ಸಮಾಜದಲ್ಲಿ ಬದುಕುವ ಕೌಶಲ್ಯಗಳನ್ನು ಮಕ್ಕಳಿಗೆ ಕಲಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದ ಅವರು, ದೇಶದ ಅಭಿವೃದ್ಧಿ, ಶಿಕ್ಷಣ, ದೇವಸ್ಥಾನ ಹಾಗೂ ಊರಿನ ಸಮಗ್ರ ಅಭಿವೃದ್ಧಿಯೇ ಮೊದಲ ಆದ್ಯತೆಯಾಗಬೇಕು. ರಾಜಕೀಯವನ್ನು ಬದಿಗಿಟ್ಟು ಎಲ್ಲರೂ ಒಟ್ಟಾಗಿ ಕೆಲಸ ಮಾಡುವಂತೆ ಶಾಸಕಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ನೂತನ ಕೊಠಡಿ ನಿರ್ಮಾಣಕ್ಕಾಗಿ ಸಲ್ಲಿಸಿದ ಮನವಿಯನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಗಣ್ಯರು ಉಪಸ್ಥಿತರಿದ್ದರು.

