ಪೊಲೀಸ್ ವಿಚಾರಣೆ ನೆರೆಹೊರೆಯವರ,ಸಾಮಾಜಿಕ ಜಾಲತಾಣದ ಅಪಪ್ರಚಾರದಿಂದ ಮಾನಸಿಕ ಒತ್ತಡ – ಕುಟುಂಬಸ್ಥರ ಆರೋಪ
ಕಾಸರಗೋಡು: ಚಿನ್ನಾಭರಣ ಕಳವು ಆರೋಪದಿಂದ ಮಾನಸಿಕವಾಗಿ ನೊಂದಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆದೂರು ಸಮೀಪದ ನೆಲ್ತಡ್ಕದಲ್ಲಿ ನಡೆದಿದೆ.
ನೆಡ್ಕ ನಿವಾಸಿ ಜಸೀಲಾ (24) ಮೃತರಾಗಿದ್ದಾರೆ. ಇವರು ಎರಡು ಮಕ್ಕಳ ತಾಯಿಯಾಗಿದ್ದರು. ನೆರೆಮನೆಯ ಯುವಕ ಹಾಗೂ ಆತನ ಕುಟುಂಬಸ್ಥರು ಜಸೀಲಾ ವಿರುದ್ಧ ಚಿನ್ನಾಭರಣ ಕಳವು ಆರೋಪ ಹೊರಿಸಿ ಪೊಲೀಸ್ ದೂರು ನೀಡಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಜಸೀಲಾರನ್ನು ಠಾಣೆಗೆ ಕರೆದೊಯ್ದು ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ, ಚಿನ್ನಾಭರಣ ಕಳವಿಗೆ ಸಂಬಂಧಿಸಿದಂತೆ ಯಾವುದೇ ಸುಳಿವು ಅಥವಾ ಸಾಕ್ಷ್ಯಗಳು ದೊರಕದ ಕಾರಣ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಆದಾಗ್ಯೂ, ವಿಚಾರಣೆ ಹೆಸರಿನಲ್ಲಿ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇದಲ್ಲದೆ, ಜಸೀಲಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರವೂ ನಡೆದಿದ್ದು, ಇದರಿಂದ ಅವರು ಮಾನಸಿಕವಾಗಿ ಕುಗ್ಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳಿಂದ ಮನನೊಂದಿದ್ದ ಜಸೀಲಾ ಕಳೆದ ರವಿವಾರ ತಾನು ಅಮಾಯಕಿ ಎಂದು ಹೇಳಿಕೊಂಡು ವಿಡಿಯೋ ಚಿತ್ರೀಕರಿಸಿ ವಿಷ ಸೇವಿಸಿದ್ದಾಳೆ ಎನ್ನಲಾಗಿದೆ. ಗಂಭೀರ ಸ್ಥಿತಿಯಲ್ಲಿ ಅವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ.
ಅದೂರು ಪೊಲೀಸ್ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

