ಕೊಚ್ಚಿ, ಫೆ.25: ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡು ವಿಕಲಚೇತನ ಯುವಕನನ್ನು ಹೋಟೆಲ್ಗೆ ಕರೆಸಿ ಹನಿಟ್ರ್ಯಾಪ್ ಮೂಲಕ ಹಣ ಸುಲಿಗೆ ಮಾಡಲು ಯತ್ನಿಸಿದ ಮಹಿಳೆ ಸೇರಿದಂತೆ ನಾಲ್ವರನ್ನು ಕೊಚ್ಚಿಯ ಕಡವಂತ್ರ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪರವೂರ್ನ ಸಫ್ನಾ, ವೈಟ್ಟಿಲದ ಜಾನ್ ರಾಹುಲ್, ಇರುಂಪನಂನ ಅಮಲ್ ಮತ್ತು ಮರಡು ಮೂಲದ ಆನಂದ್ ಬಂಧಿತರು. ಸಂಜು ಎಂಬ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಸಫ್ನಾ ಮತ್ತು ಆನಂದ್ ಕಾಕ್ಕನಾಡ್ನ ಅಪಾರ್ಟ್ಮೆಂಟ್ನಲ್ಲಿ ಅಡಗಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕೊಲ್ಲಂ ಜಿಲ್ಲೆಯ 30 ವರ್ಷದ ಮಾತು ಬಾರದ ಹಾಗೂ ಕಿವುಡುತನದ ಸಮಸ್ಯೆಯುಳ್ಳ ಯುವಕನೊಂದಿಗೆ ಸಫ್ನಾ ಇನ್ಸ್ಟಾಗ್ರಾಮ್ ಮೂಲಕ ಸ್ನೇಹ ಬೆಳೆಸಿ, ಫೆ.22 ರಂದು ಪನಂಪಿಳ್ಳಿ ನಗರದ ಸೌತ್ ಬ್ರಿಡ್ಜ್ ಸಮೀಪದ ಹೋಟೆಲ್ಗೆ ಕರೆಸಿಕೊಂಡಿದ್ದಳು. ಯುವಕ ರೂಮ್ಗೆ ಬಂದ ತಕ್ಷಣ ಗ್ಯಾಂಗ್ ಸದಸ್ಯರು ಅಸಭ್ಯ ವಿಡಿಯೋ ಚಿತ್ರೀಕರಣದ ಮೂಲಕ ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಿದ್ದಾರೆ.
ಯುವಕ ನಿರಾಕರಿಸಿದಾಗ ಆರೋಪಿಗಳು ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಬಳಿಕ ಆತನ Google Pay ಖಾತೆಯನ್ನು ಬಲವಂತವಾಗಿ ತೆರೆಯಿಸಿ ಹಣ ವರ್ಗಾವಣೆ ಮಾಡಲು ಪ್ರಯತ್ನಿಸಿದ್ದು, ಖಾತೆಯಲ್ಲಿ ಹಣ ಇಲ್ಲದ ಕಾರಣ ಬೆದರಿಕೆ ಹಾಕಿ ಬೆತ್ತಲೆ ಫೋಟೋಗಳನ್ನು ತೆಗೆದಿದ್ದಾರೆ.
ಫೆ.24ರಂದು ಯುವಕ ದೂರು ನೀಡಿದ್ದು, ಸಂಜ್ಞಾ ಭಾಷಾ ತಜ್ಞರ ಸಹಾಯದಿಂದ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ (BNS) ಅಡಿಯಲ್ಲಿ ಹಲ್ಲೆ, ಸುಲಿಗೆ ಹಾಗೂ ವಿಕಲಚೇತನರ ಹಕ್ಕುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ತನಿಖೆ ಮುಂದುವರಿದಿದೆ.



