ಕೊನೆಯ ಹಂತದ ತಯಾರಿಯಲ್ಲಿ ಗಮನಿಸಬೇಕಾದ ಅಂಶಗಳು ??
ಬರಹ : ಜೇಸಿ ಮೋಹನ್ ಚಂದ್ರ.
ರಾಜ್ಯದಲ್ಲಿ ಫೆಬ್ರವರಿ 28, 2026ರಿಂದ ಮಾರ್ಚ್ 17, 2026ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ–1 ನಡೆಯಲಿದ್ದು, ಸಾವಿರಾರು ವಿದ್ಯಾರ್ಥಿಗಳು ಎರಡು ವರ್ಷಗಳ ನಿರಂತರ ಅಧ್ಯಯನದ ಫಲಿತಾಂಶವನ್ನು ಪರೀಕ್ಷಿಸುವ ಮಹತ್ವದ ಹಂತವನ್ನು ಎದುರಿಸಲು ಸಜ್ಜಾಗಿದ್ದಾರೆ. ಈ ಪರೀಕ್ಷೆ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ದಿಕ್ಕನ್ನು ನಿರ್ಧರಿಸುವುದರ ಜೊತೆಗೆ, ಭವಿಷ್ಯದ ಸರ್ಕಾರಿ ಮತ್ತು ಖಾಸಗಿ ಉದ್ಯೋಗಾವಕಾಶಗಳಿಗೂ ಪಥ ಪ್ರದರ್ಶಕವಾಗುತ್ತದೆ.

ಆತ್ಮವಿಶ್ವಾಸ ಮತ್ತು ಶಿಸ್ತು ಅತ್ಯಗತ್ಯ
ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸ, ಶಿಸ್ತು ಹಾಗೂ ಸಮಾಧಾನದಿಂದ ಪ್ರಶ್ನೆಗಳನ್ನು ಎದುರಿಸುವುದು ಮುಖ್ಯ. ಕೊನೆಯ ಹಂತದ ತಯಾರಿಯಲ್ಲಿ ಗೊಂದಲಕ್ಕೆ ಒಳಗಾಗದೆ, ಈಗಾಗಲೇ ಕಲಿತ ಪಾಠಗಳ ಪುನರಾವರ್ತನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೊಸ ವಿಷಯಗಳನ್ನು ಕಲಿಯುವ ಪ್ರಯತ್ನಕ್ಕಿಂತ ಸಂಕ್ಷಿಪ್ತ ನೋಟ್ಸ್ಗಳನ್ನು ಮನನ ಮಾಡಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ.
ಆರೋಗ್ಯದ ಕಡೆ ಗಮನ ಇರಲಿ!
ಪರೀಕ್ಷಾ ಅವಧಿಯಲ್ಲಿ ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಒಳಿತು. ಆರೋಗ್ಯಕರ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವ ಅಭ್ಯಾಸ ಮತ್ತು ಪ್ರತಿದಿನ ಕನಿಷ್ಠ 6ರಿಂದ 7 ಗಂಟೆಗಳ ನಿದ್ರೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಲು ಅಗತ್ಯವಾಗಿದೆ.
ಪರೀಕ್ಷಾ ದಿನದ ಮುನ್ನೆಚ್ಚರಿಕೆಗಳು
ಪರೀಕ್ಷೆಯ ದಿನ ಯಾವುದೇ ಗಡಿಬಿಡಿಗೆ ಅವಕಾಶ ನೀಡದೆ, ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 30 ನಿಮಿಷಗಳ ಮುಂಚೆಯೇ ತಲುಪಬೇಕು. ಕೊಠಡಿ ಮತ್ತು ನೋಂದಣಿ ಸಂಖ್ಯೆಯನ್ನು ಸರಿಯಾಗಿ ಪರಿಶೀಲಿಸಿ, ಹಾಲ್ ಟಿಕೆಟ್ನ ಮಾಹಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಕೊಠಡಿ ಮೇಲ್ವಿಚಾರಕರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಂತ ಮುಖ್ಯ.
ಉತ್ತರಿಸುವ ವಿಧಾನ
ಪ್ರಶ್ನೆ ಪತ್ರಿಕೆಯನ್ನು ಸಂಪೂರ್ಣವಾಗಿ ಓದಿ, ಸುಲಭವಾಗಿ ಉತ್ತರಿಸಬಹುದಾದ ಪ್ರಶ್ನೆಗಳಿಂದಲೇ ಆರಂಭಿಸುವುದು ಉತ್ತಮ. ಉತ್ತರಗಳನ್ನು ಅಂದವಾಗಿ, ಸ್ಪಷ್ಟವಾಗಿ ಹಾಗೂ ಕ್ರಮಬದ್ಧವಾಗಿ ಬರೆಯಬೇಕು. ಪ್ರಶ್ನೆ ಸಂಖ್ಯೆಗಳ ಸರಿಯಾದ ನಮೂದು ಅತ್ಯಂತ ಮುಖ್ಯ. ಪರೀಕ್ಷೆ ವೇಳೆ ಒತ್ತಡಕ್ಕೆ ಒಳಗಾಗದೆ ಶಾಂತ ಮನಸ್ಸಿನಿಂದ ಉತ್ತರಿಸುವುದು ಯಶಸ್ಸಿನ ಗುಟ್ಟು.
ಪರೀಕ್ಷೆ ಮುಗಿಯುವ ಮೊದಲು ಉತ್ತರ ಪತ್ರಿಕೆಯನ್ನು ಪರಿಶೀಲಿಸಿ, ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಸಂಖ್ಯೆ ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಉತ್ತರ ಪತ್ರಿಕೆಯನ್ನು ಸಲ್ಲಿಸಿ, ಮುಂದಿನ ಪರೀಕ್ಷೆಗಳಿಗೂ ಧೈರ್ಯದಿಂದ ತಯಾರಿಯನ್ನು ಮುಂದುವರಿಸಬೇಕು.
ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು. ಯಶಸ್ಸು ನಿಮ್ಮದಾಗಲಿ!
ಬರಹ :
ಜೇಸಿ ಮೋಹನ್ ಚಂದ್ರ
ಇತಿಹಾಸ ಉಪನ್ಯಾಸಕರು
ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು, ಅರಂತೋಡು
ಸುಳ್ಯ ತಾಲೂಕು





