ದೋಹಾ: ಇರಾನ್ ದಾಳಿಯ ಹಿನ್ನೆಲೆ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕತಾರ್ ಮಿನಿಸ್ಟ್ರಿ ಆಫ್ ಇಂಟೀರಿಯರ್ ( ಕತಾರ್ ಆಂತರಿಕ ವ್ಯವಹಾರಗಳ ಸಚಿವಾಲಯ)
ಜನರಿಗೆ ತುರ್ತು ಸೂಚನೆ ನೀಡಿದೆ. ಪರಿಸ್ಥಿತಿ ಸಂಪೂರ್ಣ ಸ್ಥಿರವಾಗುವವರೆಗೆ ಎಲ್ಲರೂ ತಮ್ಮ ಮನೆಗಳೊಳಗೆ ಸುರಕ್ಷಿತವಾಗಿ ಉಳಿಯುವಂತೆ ಮನವಿ ಮಾಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಪ್ರಕಟಣೆಯಲ್ಲಿ ಸಚಿವಾಲಯವು, “ಕಿಟಕಿಗಳು ಹಾಗೂ ತೆರೆದ ಪ್ರದೇಶಗಳಿಂದ ದೂರವಿರಿ. ಅತ್ಯಾವಶ್ಯಕ ಸಂದರ್ಭಗಳನ್ನು ಹೊರತುಪಡಿಸಿ ಮನೆಗಳನ್ನು ತೊರೆಯಬೇಡಿ” ಎಂದು ಸ್ಪಷ್ಟವಾಗಿ ತಿಳಿಸಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಯಾವುದೇ ಅಪಾಯದ ಪರಿಸ್ಥಿತಿಯನ್ನು ತಡೆಯುವ ಉದ್ದೇಶ ಇದಾಗಿದೆ ಎಂದು ತಿಳಿಸಿದೆ.
ಇರಾನ್ ದಾಳಿಯ ನಡುವೆಯೇ ಮುನ್ನೆಚ್ಚರಿಕಾ ಕ್ರಮವಾಗಿ ಈ ಸೂಚನೆ ನೀಡಲಾಗಿದ್ದು, ನಾಗರಿಕರು ಶಾಂತವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ. ಅಗತ್ಯವಿದ್ದರೆ ತುರ್ತು ಸೇವೆಗಳೊಂದಿಗೆ ಸಂಪರ್ಕದಲ್ಲಿರಲು ಹಾಗೂ ಅಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನೇ ನಂಬುವಂತೆ ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ಪರಿಸ್ಥಿತಿಯನ್ನು ಸರ್ಕಾರ ಸಮೀಕ್ಷೆ ಮಾಡುತ್ತಿದ್ದು, ಮುಂದಿನ ಬೆಳವಣಿಗೆಗಳ ಕುರಿತು ಅಗತ್ಯವಾದ ನವೀಕರಣಗಳನ್ನು ನೀಡುವುದಾಗಿ ಸಚಿವಾಲಯ ಭರವಸೆ ನೀಡಿದೆ.


