“ಒತ್ತಡದ ಕ್ಷಣಗಳಲ್ಲಿ ಶಾಂತ ಶೌರ್ಯ ಪ್ರದರ್ಶಿಸಿದ ಸ್ಯಾಮ್ಸನ್; 97ರ ಮಿಂಚಿನಿಂದ ಭಾರತದ ಸೆಮಿ ಕನಸು ಸಾಕಾರ”
ಕೋಲ್ಕತಾ: ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ‘ಗೆಲ್ಲಲೇಬೇಕಾದ’ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ವೆಸ್ಟ್‌ಇಂಡೀಸ್ ವಿರುದ್ಧ ಐದು ವಿಕೆಟ್‌ಗಳ ರೋಚಕ ಜಯ ಸಾಧಿಸಿ ಸೆಮಿ ಫೈನಲ್‌ಗೆ ಅರ್ಹತೆ ಪಡೆದಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಅದ್ಭುತ ಬ್ಯಾಟಿಂಗ್ ಭಾರತಕ್ಕೆ ಭರವಸೆಯ ಆಧಾರವಾಯಿತು.
ವೆಸ್ಟ್‌ಇಂಡೀಸ್‌ನ ಬೃಹತ್ ಮೊತ್ತ
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 195 ರನ್‌ಗಳನ್ನು ಕಲೆಹಾಕಿತು. ಮಧ್ಯಮ ಕ್ರಮದ ಬ್ಯಾಟರ್‌ಗಳು ವೇಗದ ರನ್‌ಗಳ ಮೂಲಕ ತಂಡವನ್ನು ಬಲಿಷ್ಠ ಮೊತ್ತದತ್ತ ಕೊಂಡೊಯ್ದರು. ಭಾರತದ ಬೌಲರ್‌ಗಳು ಮಧ್ಯಂತರದಲ್ಲಿ ವಿಕೆಟ್ ಪಡೆಯಲು ಪ್ರಯತ್ನಿಸಿದರೂ, ಎದುರಾಳಿಯ ದಿಟ್ಟ ಆಟದಿಂದ 195 ರನ್‌ಗಳ ಸವಾಲಿನ ಗುರಿ ನಿಗದಿಯಾಯಿತು.
ಸಂಜು ಸ್ಯಾಮ್ಸನ್ ಮಿಂಚು
196 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕ ಬ್ಯಾಟರ್ ಸಂಜು ಸ್ಯಾಟ್ಸನ್ ದಿಟ್ಟ ಆಧಾರ ನೀಡಿದರು. ಅವರು ಕೇವಲ 50 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ ಔಟಾಗದೆ 97 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದರು. ಅವರ ಸಮರ್ಥ ಮತ್ತು ಜವಾಬ್ದಾರಿಯುತ ಆಟದಿಂದ ಭಾರತ ತಂಡ ಒತ್ತಡವನ್ನು ಸಮರ್ಥವಾಗಿ ಎದುರಿಸಿತು.
ಇತರೆ ಬ್ಯಾಟರ್‌ಗಳ ಸಹಕಾರದೊಂದಿಗೆ ಭಾರತವು 19.2 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 199 ರನ್‌ಗಳನ್ನು ಕಲೆಹಾಕಿ ಗುರಿ ಮುಟ್ಟಿತು. ಕೊನೆಯ ಓವರ್‌ಗಳಲ್ಲಿ ಉತ್ಕಂಠೆ ಹೆಚ್ಚಾದರೂ, ಸಂಜು ಅವರ ಶಾಂತ ಆಟ ಜಯವನ್ನು ಖಚಿತಪಡಿಸಿತು.
ಸೆಮಿ ಫೈನಲ್ ಸವಾಲು
ಈ ಜಯದೊಂದಿಗೆ ಭಾರತ ತಂಡ ಸೆಮಿ ಫೈನಲ್‌ಗೆ ಪ್ರವೇಶಿಸಿದೆ. ಮಾ.5ರಂದು ಮುಂಬೈನಲ್ಲಿ ನಡೆಯಲಿರುವ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಕ್ರೀಡಾಭಿಮಾನಿಗಳಲ್ಲಿ ಈಗಲೇ ಈ ಮಹತ್ವದ ಪಂದ್ಯಕ್ಕೆ ಭಾರೀ ನಿರೀಕ್ಷೆ ಮೂಡಿದೆ.


