Featured, ಇತರೆ, ಸ್ಥಳೀಯ

ಮಾ.13ರಂದು ಅರಂತೋಡಿನಲ್ಲಿ ಬೃಹತ್ ಸೌಹಾರ್ದ ಇಫ್ತಾರ್ ಕೂಟ

ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ 21ನೇ ವರ್ಷದ ಆಯೋಜನೆ; ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಕಾರ್ಯಕ್ರಮ.

ಅರಂತೋಡು: ಪವಿತ್ರ ರಂಜಾನ್ ಮಾಸವು ಮಾನವೀಯ ಮೌಲ್ಯಗಳು, ಸಹಾನುಭೂತಿ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರುವ ಮಹತ್ವದ ಕಾಲವಾಗಿದ್ದು, ಈ ಸೌಹಾರ್ದತೆಯ ಆತ್ಮವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು ಇದರ ವತಿಯಿಂದ 21ನೇ ವರ್ಷದ ಬೃಹತ್ ಸೌಹಾರ್ದ ಇಫ್ತಾರ್ ಕೂಟವನ್ನು ಮಾರ್ಚ್ 13ರಂದು ಅರಂತೋಡಿನ ತೆಕ್ಕಿಲ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.

ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸೌಹಾರ್ದ ಸಂಗಮವು ವಿವಿಧ ಧರ್ಮ, ಜಾತಿ ಮತ್ತು ಸಮುದಾಯದ ಜನರನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸುವ ಮಹತ್ವದ ಕಾರ್ಯಕ್ರಮವಾಗಲಿದೆ. ರಂಜಾನ್ ಮಾಸದ ಆಧ್ಯಾತ್ಮಿಕ ಸ್ಫೂರ್ತಿಯ ನಡುವೆ ಪರಸ್ಪರ ಗೌರವ, ಸಹೋದರತ್ವ ಮತ್ತು ಸಾಮಾಜಿಕ ಏಕತೆಯ ಸಂದೇಶವನ್ನು ಸಮಾಜದೊಳಗೆ ಹರಡುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.
ಕಾರ್ಯಕ್ರಮದಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರಗಳ ಪ್ರಮುಖರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು ಭಾಗವಹಿಸಿ ಸೌಹಾರ್ದತೆಯ ಸಂದೇಶವನ್ನು ಹಂಚಿಕೊಳ್ಳಲಿದ್ದಾರೆ. ಅಲ್ಲದೆ ಸ್ಥಳೀಯ ಸಾರ್ವಜನಿಕರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಅವರು, “ರಂಜಾನ್ ಮಾಸವು ಸಹನೆ, ತ್ಯಾಗ ಮತ್ತು ಪರಸ್ಪರ ಪ್ರೀತಿಯ ಮೌಲ್ಯಗಳನ್ನು ನೆನಪಿಸುವ ಪವಿತ್ರ ಸಮಯ. ಈ ಹಿನ್ನೆಲೆಯಲ್ಲಿ ಕಳೆದ 21 ವರ್ಷಗಳಿಂದ ಪ್ರತಿಷ್ಠಾನದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟವನ್ನು ಆಯೋಜಿಸಲಾಗುತ್ತಿದೆ ಎಂದರು

ಈ ಸೌಹಾರ್ದ ವೇದಿಕೆಯಲ್ಲಿ ಎಲ್ಲ ಸಮುದಾಯದ ಜನರು ಒಂದಾಗಿ ಭಾಗವಹಿಸುವ ಮೂಲಕ ಸಮಾಜದಲ್ಲಿ ಐಕ್ಯತೆ ಮತ್ತು ಭಾವೈಕ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಪರಸ್ಪರ ವಿಶ್ವಾಸವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಬೃಹತ್ ಸೌಹಾರ್ದ ಇಫ್ತಾರ್ ಕೂಟವು ಮತ್ತೊಮ್ಮೆ ಜನಮನಗಳನ್ನು ಒಂದಾಗಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಲಿದೆ.

Related Posts