Featured, ಇತರೆ, ಕ್ರೀಡೆ

ಕ್ರೀಡಾ ಸ್ಪೂರ್ತಿ ಮರೆತ ಪಂತ್, ಅನ್ಯಾಯದ ರನೌಟ್​​ಗೆ ಯಂಗ್ ಬ್ಯಾಟರ್ ಬಲಿ? ಹೀಗೂ ಗೆಲ್ಲಬೇಕಾ ಎಂದು ಫ್ಯಾನ್ಸ್ ಟೀಕೆ

ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಯುವ ಆಟಗಾರ ಅಂಗ್‌ಕ್ರಿಶ್ ರಘುವಂಶಿ ವಿವಾದಾತ್ಮಕವಾಗಿ ಔಟ್ ಆಗಿರುವ ಘಟನೆ ಚರ್ಚೆಗೆ ಗ್ರಾಸವಾಗಿದೆ. ಲಖನೌ ವಿರುದ್ಧ ನಡೆದ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಅಂಪೈರ್ ನಿರ್ಧಾರ ಕೆಕೆಆರ್ ಡಗೌಟ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.
ಕೆಕೆಆರ್ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ಪ್ರಿನ್ಸ್ ಯಾದವ್ ಬೌಲಿಂಗ್ ಮಾಡುತ್ತಿದ್ದ ವೇಳೆ, ರಘುವಂಶಿ ಮಿಡ್-ಆನ್ ಕಡೆಗೆ ಚೆಂಡು ತಳ್ಳಿ ರನ್‌ಗೆ ಓಡಲು ಯತ್ನಿಸಿದರು. ಆದರೆ ಮಧ್ಯದಲ್ಲಿ ಜೊತೆಯಾಟಗಾರರಿಂದ ತಡೆದು ಹಿಂತಿರುಗುವಾಗ ಡೈವ್ ಮಾಡಿದರು. ಈ ವೇಳೆ ಮೊಹಮ್ಮದ್ ಶಮಿ ಎಸೆದ ಥ್ರೋ ರಘುವಂಶಿ ದೇಹಕ್ಕೆ ತಗುಲಿತು.
ಆದಿಯಲ್ಲಿ ನಾಟೌಟ್ ಎನ್ನುವ ಭಾವನೆ ಮೂಡಿದರೂ, ಮೂರನೇ ಅಂಪೈರ್ ಮರುಪರಿಶೀಲನೆ ಬಳಿಕ ರಘುವಂಶಿ ಥ್ರೋಗೆ ಅನುಗುಣವಾಗಿ ದಿಕ್ಕು ಬದಲಾಯಿಸಿದ್ದರೆಂದು ತೀರ್ಮಾನಿಸಿ, ಕ್ರಿಕೆಟ್ ನಿಯಮ 37 ಅಡಿಯಲ್ಲಿ ‘ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ’ ಕಾರಣ ಔಟ್ ಘೋಷಿಸಿದರು.
ಈ ನಿರ್ಧಾರದಿಂದ ಕೆಕೆಆರ್ ಆಟಗಾರರು ಹಾಗೂ ನಿರ್ವಹಣೆ ಅಸಮಾಧಾನ ವ್ಯಕ್ತಪಡಿಸಿದರು. ರಘುವಂಶಿ ಕೂಡ ಕೋಪಗೊಂಡು ಮೈದಾನದಲ್ಲೇ ಹೆಲ್ಮೆಟ್ ಎಸೆದು, ಬ್ಯಾಟ್ ಬೀಸಿದ ಘಟನೆ ಗಮನಸೆಳೆಯಿತು. ಅವರು 8 ಎಸೆತಗಳಲ್ಲಿ 9 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಇನ್ನೊಂದೆಡೆ, ಎದುರಾಳಿ ತಂಡದ ನಾಯಕ ರಿಷಭ್ ಪಂತ್ ಅಂಪೈರ್ ನಿರ್ಧಾರವನ್ನು ಒಪ್ಪಿಕೊಂಡಿರುವುದು ಅಭಿಮಾನಿಗಳ ಟೀಕೆಗೆ ಕಾರಣವಾಗಿದೆ. ಕ್ರೀಡಾಸ್ಪೂರ್ತಿ ತೋರಿಸಲು ಅವಕಾಶವಿದ್ದರೂ ಅದನ್ನು ಬಳಸಲಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ
ಐಪಿಎಲ್ ಇತಿಹಾಸದಲ್ಲಿ ‘ಫೀಲ್ಡಿಂಗ್‌ಗೆ ಅಡ್ಡಿಪಡಿಸುವ’ ನಿಯಮದಡಿಯಲ್ಲಿ ಔಟ್ ಆಗಿರುವ ಆಟಗಾರರ ಸಂಖ್ಯೆ ಕಡಿಮೆ. ಈ ಪಟ್ಟಿಯಲ್ಲಿ ಈಗ ರಘುವಂಶಿಯೂ ಸೇರಿಕೊಂಡಿದ್ದಾರೆ.

Related Posts