ವಿಶ್ವದ ಅತಿ ವಿಚಿತ್ರ ಮತ್ತು ರಹಸ್ಯಮಯ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ (Nazca Lines) ನಾಸ್ಕಾ ಲೈನ್ಸ್ ಮಾನವನ ಕಲ್ಪನೆಗೂ ಮೀರಿದ ಅದ್ಭುತ ಸೃಷ್ಟಿಯಾಗಿದೆ. ದಕ್ಷಿಣ ಅಮೆರಿಕದ ಪೆರು (Peru) ದೇಶದ ನಾಸ್ಕಾ ಮರುಭೂಮಿಯಲ್ಲಿ ಹರಡಿಕೊಂಡಿರುವ ಈ ಭೂಚಿತ್ರಗಳು ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟವು ಎಂಬುದು ಇನ್ನೂ ಅಚ್ಚರಿಯ ಸಂಗತಿ.

ಮರುಭೂಮಿಯ ಬಿಸಿಲಿನ ನಡುವೆ ನೆಲದ ಮೇಲೆ ಎಳೆಯಲ್ಪಟ್ಟ ಈ ರೇಖೆಗಳು ಮೊದಲ ನೋಟಕ್ಕೆ ಸರಳವಾಗಿ ಕಾಣಬಹುದು. ಆದರೆ, ಆಕಾಶದಿಂದ ನೋಡಿದಾಗ ಅವು ಮಹಾಕಾಯ ಪ್ರಾಣಿಗಳು, ಪಕ್ಷಿಗಳು ಮತ್ತು ಜ್ಯಾಮಿತೀಯ ಆಕಾರಗಳಾಗಿ ರೂಪುಗೊಳ್ಳುತ್ತವೆ. ಕೋತಿ, ಸಾಳಿಗೆ, ಹಕ್ಕಿ ಮೊದಲಾದ ಚಿತ್ರಗಳು ಹಲವು ಕಿಲೋಮೀಟರ್‌ಗಳಷ್ಟು ವಿಸ್ತಾರ ಹೊಂದಿರುವುದು ಗಮನಾರ್ಹ. ಇದು ಮಾನವ ಕುಶಲತೆಗೆ ಸಾಕ್ಷಿಯಾಗಿದ್ದು, “ಇದನ್ನು ಆ ಕಾಲದಲ್ಲಿ ಹೇಗೆ ನಿರ್ಮಿಸಿದರು?” ಎಂಬ ಪ್ರಶ್ನೆ ಇಂದಿಗೂ ಸಂಶೋಧಕರನ್ನು ಕಾಡುತ್ತಿದೆ.

ಈ ಭೂಚಿತ್ರಗಳನ್ನು ರಚಿಸಿದವರು ಪ್ರಾಚೀನ ನಾಸ್ಕಾ ನಾಗರಿಕರು. ಮೇಲ್ಮೈಯಲ್ಲಿರುವ ಕಪ್ಪು ಕಲ್ಲುಗಳನ್ನು ತೆಗೆದು ಕೆಳಗಿನ ಹಗುರ ಬಣ್ಣದ ಮಣ್ಣನ್ನು ಹೊರಗೆ ತರುವ ಮೂಲಕ ಅವರು ಈ ರೇಖೆಗಳನ್ನು ರೂಪಿಸಿದರು. ಸರಳ ವಿಧಾನವಾದರೂ, ಇಷ್ಟು ದೊಡ್ಡ ಮಟ್ಟದಲ್ಲಿ ನಿಖರತೆಯನ್ನು ಸಾಧಿಸಿರುವುದು ಆಶ್ಚರ್ಯಕರ ಸಂಗತಿ. ಈ ರೇಖೆಗಳ ಉದ್ದೇಶವೇನು ಎಂಬುದರ ಕುರಿತು ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಕೆಲವರು ಇದನ್ನು ಖಗೋಳ ಶಾಸ್ತ್ರದ ನಕ್ಷೆ ಎಂದು ನಂಬುತ್ತಾರೆ. ಕೆಲವು ಸಂಶೋಧಕರು ನೀರಿನ ಮೂಲಗಳನ್ನು ಗುರುತಿಸಲು ಇದನ್ನು ಬಳಸಿರಬಹುದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಈ ಎಲ್ಲವುಗಳ ಮಧ್ಯೆ ನಾಸ್ಕಾ ಲೈನ್ಸ್ ಇನ್ನೂ ಒಂದು ದೊಡ್ಡ ರಹಸ್ಯವಾಗಿಯೇ ಉಳಿದಿವೆ.

ಈ ಅದ್ಭುತ ಸೃಷ್ಟಿಯ ಮಹತ್ವವನ್ನು ಗಮನಿಸಿದ ಉನಸ್ಕೂ (UNESCO) ಸಂಸ್ಥೆ ನಾಸ್ಕಾ ಲೈನ್ಸ್ ಅನ್ನು ವಿಶ್ವ ಪಾರಂಪರ್ಯ ತಾಣವಾಗಿ ಘೋಷಿಸಿದೆ. ಇಂದಿಗೂ ಇದು ವಿಶ್ವದ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಆಕರ್ಷಣೆಯಾಗಿದ್ದು, ಮಾನವ ಇತಿಹಾಸದ ರಹಸ್ಯಭರಿತ ಅಧ್ಯಾಯವೊಂದಾಗಿ ಉಳಿದಿದೆ. ನಾಸ್ಕಾ ಲೈನ್ಸ್ ನಮಗೆ ಒಂದು ಸಂದೇಶ ನೀಡುತ್ತವೆ – ಕಾಲ ಬದಲಾಗಬಹುದು, ತಂತ್ರಜ್ಞಾನ ಬದಲಾಗಬಹುದು, ಆದರೆ ಮಾನವನ ಸೃಜನಶೀಲತೆ ಮತ್ತು ಕುತೂಹಲ ಎಂದಿಗೂ ಅಳಿಯುವುದಿಲ್ಲ.
ಈ ನಾಸ್ಕಾ ಲೈನ್‌ಗಳು ಇಂದಿಗೂ ಒಂದು ದೊಡ್ಡ ರಹಸ್ಯವೇ… ಮಾನವನ ಕಲ್ಪನೆ ಎಷ್ಟರ ಮಟ್ಟಿಗೆ ಹೋಗಬಹುದು ಎಂಬುದಕ್ಕೆ ಇದು ಜೀವಂತ ಸಾಕ್ಷಿ!……..






m
