Featured, ಇತರೆ, ಸ್ಥಳೀಯ

ಸುಳ್ಯ–ಕಡಬ ಕ್ಷೇತ್ರದಲ್ಲಿ SIR ಪ್ರಗತಿ ಪರಿಶೀಲನಾ ಸಭೆ: ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಡಿಜಿಟೈಸ್ಡ್ ಹೆಲ್ಪ್ ಸೆಂಟರ್ ಆರಂಭ

ಸುಳ್ಯ ನಗರಕ್ಕೂ ನಗರ ಪಂಚಾಯತ್‌ನಲ್ಲಿ ಡಿಜಿಟೈಸ್ಡ್ ಹೆಲ್ಪ್ ಸೆಂಟರ್ ಆರಂಭ 

ಸುಳ್ಯ, ಜು. 8: ಸುಳ್ಯ ಮತ್ತು ಕಡಬ ತಾಲ್ಲೂಕುಗಳಿಗೆ ಸಂಬಂಧಿಸಿದ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (Special Intensive Revision–SIR) ಪ್ರಗತಿ ಪರಿಶೀಲನಾ ಸಭೆಯು ಸುಳ್ಯ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಜಯಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸುಳ್ಯ ತಹಶೀಲ್ದಾರ್ ಮಂಜುಳ ಎಂ. ಅವರ ಉಪಸ್ಥಿತಿಯಲ್ಲಿ ಜುಲೈ 8ರಂದು ಸುಳ್ಯ ತಾಲೂಕು ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಮತದಾರರ ನೋಂದಣಾಧಿಕಾರಿ ಜಯಲಕ್ಷ್ಮಿ ಅವರು, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಎಲ್‌ಒಗಳು (BLO) ಹಾಗೂ ಚುನಾವಣಾ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದಲೂ ಉತ್ತಮ ಸಹಕಾರ ದೊರೆಯುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,08,487 ಮತದಾರರಿದ್ದು, ಜುಲೈ 8ರವರೆಗೆ 1,93,344 ಎನ್ಯುಮರೇಷನ್ ಫಾರ್ಮ್‌ಗಳನ್ನು (Enumeration Forms) ಮನೆಮನೆಗೆ ವಿತರಿಸಲಾಗಿದೆ. ಇದುವರೆಗೆ 4,342 ಫಾರ್ಮ್‌ಗಳನ್ನು ಡಿಜಿಟೈಸ್ಡ್ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈಗಾಗಲೇ ಎನ್ಯುಮರೇಷನ್ ಫಾರ್ಮ್ ಪಡೆದಿರುವ ಮತದಾರರು ಅದನ್ನು ಸರಿಯಾಗಿ ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ಬಿಎಲ್‌ಒಗಳಿಗೆ ಸಲ್ಲಿಸಬೇಕು. ಮುಂದಿನ ಹಂತದಲ್ಲಿ ಭರ್ತಿಯಾದ ಫಾರ್ಮ್‌ಗಳನ್ನು ಡಿಜಿಟೈಸ್ಡ್ ಮಾಡುವ ಕಾರ್ಯ ನಡೆಯಲಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಿಜಿಟೈಸ್ಡ್ ಹೆಲ್ಪ್ ಸೆಂಟರ್ ಆರಂಭಿಸಲಾಗಿದೆ. ಸುಳ್ಯ ನಗರ ವ್ಯಾಪ್ತಿಯ ಸಾರ್ವಜನಿಕರಿಗಾಗಿ ಸುಳ್ಯ ನಗರ ಪಂಚಾಯತ್ ಕಚೇರಿಯಲ್ಲಿ ಹೆಲ್ಪ್ ಸೆಂಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಫಾರ್ಮ್ ಭರ್ತಿ ಮಾಡುವಲ್ಲಿ ಯಾವುದೇ ಸಹಾಯ ಅಥವಾ ಮಾರ್ಗದರ್ಶನ ಬೇಕಿದ್ದರೆ ಈ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಫಾರ್ಮ್ ಭರ್ತಿ ವೇಳೆ ತಪ್ಪಾದರೆ ಏನು ಮಾಡಬೇಕು?

ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಫಾರ್ಮ್ ಭರ್ತಿ ಮಾಡುವಾಗ ಆಕಸ್ಮಿಕವಾಗಿ ಸಣ್ಣಪುಟ್ಟ ತಪ್ಪುಗಳು ಸಂಭವಿಸುವುದು ಸಹಜ. ಇಂತಹ ಸಂದರ್ಭಗಳಲ್ಲಿ ಸ್ವಯಂ ಹೆಚ್ಚಿನ ತಿದ್ದುಪಡಿ ಮಾಡಲು ಪ್ರಯತ್ನಿಸದೆ, ಸಮೀಪದ ಡಿಜಿಟೈಸ್ಡ್ ಹೆಲ್ಪ್ ಸೆಂಟರ್‌ಗೆ ಭೇಟಿ ನೀಡಿ ಅಧಿಕಾರಿಗಳ ಸಲಹೆ ಪಡೆದು ಸಮಸ್ಯೆ ಪರಿಹರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹೊಸ ಅಥವಾ ಯಥಾಪ್ರತಿ ಫಾರ್ಮ್ ನೀಡಲಾಗುವುದಿಲ್ಲ. ಆದ್ದರಿಂದ ಫಾರ್ಮ್ ಭರ್ತಿ ಮಾಡುವಾಗ ಅಗತ್ಯ ಮಾಹಿತಿಯನ್ನು ಪರಿಶೀಲಿಸಿ ಭರ್ತಿ ಮಾಡಬೇಕು ಎಂದು ಸಲಹೆ ನೀಡಿದರು.
ಇದೇ ರೀತಿ SIR ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ಅನುಮಾನಗಳಿದ್ದರೂ ಸ್ಥಳೀಯ ಡಿಜಿಟೈಸ್ಡ್ ಹೆಲ್ಪ್ ಸೆಂಟರ್‌ನಲ್ಲಿ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಬಹುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ರಾಧಾಕೃಷ್ಣ ಬೊಳ್ಳೂರು, ಅಭಿಲಾಷ್ ಕಡಬ, ಭವಾನಿಶಂಕರ್ ಕಲ್ಮಡ್ಕ, ಭಾರತೀಯ ಜನತಾ ಪಕ್ಷದ ಹರೀಶ್ ಕಂಜಿಪಿಲಿ, ವಿನಯಕುಮಾರ್ ಕಂದಡ್ಕ, ಸುಭುದ್ ಮೆನಾಲ್, ಆಮ್ ಆದ್ಮಿ ಪಕ್ಷದ ರಶೀದ್ ಜಟ್ಟಿಪಳ್ಳ ಹಾಗೂ ಶಾಫಿ ಅಡ್ಕ ಉಪಸ್ಥಿತರಿದ್ದರು.
ಇದೇ ವೇಳೆ ಸುಳ್ಯ ಚುನಾವಣಾ ಶಾಖೆಯ ಉಪ ತಹಶೀಲ್ದಾರ್ ಚಂದ್ರಕಾಂತ್, ಕಡಬ ಚುನಾವಣಾ ಶಾಖೆಯ ಉಪ ತಹಶೀಲ್ದಾರ್ ಶಾಹಿದುಲ್ಲಾ ಖಾನ್, ಮತ್ತು ಚುನಾವಣಾ ಶಾಖೆಯ ಸಿಬ್ಬಂದಿಗಳಾದ ತಿರ್ಥೇಶ್ ಪಿ, ಯತೀಶ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು
m

Related Posts