ಕೋಝಿಕ್ಕೋಡ್, ಜು. 10: ಕೋಝಿಕ್ಕೋಡ್ ರೈಲು ನಿಲ್ದಾಣದ ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ಗಡಿಯಾರ ಗೋಪುರ ಶುಕ್ರವಾರ ಬೆಳಿಗ್ಗೆ ಕುಸಿದು ಬಿದ್ದಿದೆ. ಗೋಪುರದ ಅವಶೇಷಗಳು ಎರಡನೇ ಪ್ಲಾಟ್‌ಫಾರ್ಮ್ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಬೆಳಿಗ್ಗೆ ಸುಮಾರು 11:10ರ ವೇಳೆಗೆ ಈ ಘಟನೆ ಸಂಭವಿಸಿದೆ. ಅಪಘಾತ ಸಂಭವಿಸಿದ ವೇಳೆ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರು ಇಲ್ಲದಿದ್ದ ಕಾರಣ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದೆ. ಅಲ್ಲಿದ್ದ ಕೆಲ ರೈಲ್ವೆ ಸಿಬ್ಬಂದಿ ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ಘಟನೆಯ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ರೈಲು ನಿಲ್ದಾಣದ ವಿದ್ಯುತ್ ಸರಬರಾಜನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಹಾಗೂ ಭದ್ರತಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ರೈಲು ಸಂಚಾರವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ನೇತ್ರಾವತಿ ಹಾಗೂ ಎರನಾಡ್ ಎಕ್ಸ್‌ಪ್ರೆಸ್ ರೈಲುಗಳನ್ನು ವೆಲ್ಲಯಿಲ್ ಮತ್ತು ವೆಸ್ಟ್ ಹಿಲ್ ರೈಲು ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಕುಸಿದ ಗಡಿಯಾರ ಗೋಪುರವು ಒಂದು ಶತಮಾನಕ್ಕೂ ಅಧಿಕ ಹಳೆಯದಾಗಿದ್ದು, ಅದರ ಶಿಥಿಲಾವಸ್ಥೆಯ ಕುರಿತು ಈಗಾಗಲೇ ಅಧಿಕಾರಿಗಳಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು ಎಂದು ವರದಿಯಾಗಿದೆ. ಕಳೆದ ಕೆಲವು ದಿನಗಳಿಂದ ಕೋಝಿಕ್ಕೋಡ್‌ನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಗೋಪುರ ಕುಸಿಯುವ ಅಪಾಯ ಹೆಚ್ಚಾಗಿದೆ ಎಂಬ ಆತಂಕವೂ ವ್ಯಕ್ತವಾಗಿತ್ತು.
ರೈಲ್ವೆ ನಿಲ್ದಾಣದ ನವೀಕರಣ ಕಾಮಗಾರಿಯ ಭಾಗವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ವೇಳೆ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಗೋಪುರದ ದುರ್ಬಲ ಸ್ಥಿತಿಯ ಬಗ್ಗೆ ಮುಂಚಿತವಾಗಿ ಬಂದಿದ್ದ ಎಚ್ಚರಿಕೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಗಡಿಯಾರ ಗೋಪುರದ ಉಳಿದ ಭಾಗವೂ ಕುಸಿಯುವ ಅಪಾಯ ಇರುವುದರಿಂದ ಆ ಪ್ರದೇಶವನ್ನು ಭದ್ರತಾ ವಲಯವನ್ನಾಗಿ ಘೋಷಿಸಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪರಿಸ್ಥಿತಿಯನ್ನು ರೈಲ್ವೆ ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸುತ್ತಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.




m
